ಉಡುಪಿ: ವೈದ್ಯರ ನಿರ್ಲಕ್ಷ್ಯದಿಂದಲೇ ನನ್ನ ಮಗಳ ಸಾವು- ನಿಖಿತಾ ತಾಯಿ ಶೋಭಾ ಕುಲಾಲ್ ಆರೋಪ
ಉಡುಪಿ: ಎರ್ಮಾಳಿನ ಸಮೀಪದ ಕೆಮ್ಮುಂಡೇಲಿನ ವಿದ್ಯಾರ್ಥಿನಿ ನಿಖಿತಾ ಕುಲಾಲ್ ಅನುಮಾನಾಸ್ಪದ ಸಾವಿನ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಉಡುಪಿಯ ಸಿಟಿ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದ್ದು, ಸಾವಿನ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಸ್ಪತ್ರೆಯ ಮುತ್ತಿಗೆಗೆ ಮುಂದಾದ ಘಟನೆ ನಡೆದಿದೆ.
ವಿದ್ಯಾರ್ಥಿನಿ ನಿಖಿತಾ ಕುಲಾಲ್‌ಗೆ ಜೂನ್ 13ರಂದು ವಾಂತಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡ ಆಕೆಯನ್ನು ಪೋಷಕರು ಜೂನ್ 14 ರಂದು ಉಡುಪಿಯ ಸಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೂ.18 ರಂದು ನಿಖಿತಾ ಸಾವನ್ನಪ್ಪಿದ್ದರು. ಇದೀಗ ವಿದ್ಯಾರ್ಥಿನಿಯ ಸಾವಿಗೆ ವೈದ್ಯರೇ ಕಾರಣ ಎಂದು ಪೋಷಕರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿತಾ ಕುಲಾಲ್ ಸಾವಿನ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆಗೆ ಕರೆ ನೀಡಿತ್ತು.
ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಸಿಟಿ ಆಸ್ಪತ್ರೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆಯಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ತಡೆಯೊಡ್ಡಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ಎಬಿವಿಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ನಿಖಿತಾ ಕುಲಾಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯನ್ನು ನಡೆಸಿ ತಪ್ಪತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಸಿಟಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ನನ್ನ ಮಗಳ ಸಾವು- ಶೋಭಾ ಕುಲಾಲ್ ಆರೋಪ: ಮಗಳ ದೇಹ ಸ್ಥಿತಿ ಗಂಭೀರವಾಗಿರುವುದನ್ನು ಕಂಡ ನನ್ನ ಗಂಡ ಮಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ನಾವು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆ ಕರೆದು ಕೊಂಡು ಹೋಗುವುದಾಗಿ ಕೇಳಿಕೊಂಡರು ಆಸ್ಪತ್ರೆಯ ವೈದ್ಯರು ಒಪ್ಪಲಿಲ್ಲ. ನನ್ನ ಮಗಳ ಸಾವಿಗೆ ಆಸ್ಪತ್ರೆಯ ನಿರ್ಲಕ್ಷವೇ ಕಾರಣ ಎಂದು ನಿಖಿತಾ ತಾಯಿ ಶೋಭಾ ಕುಲಾಲ್ ಆರೋಪಿಸಿದ್ದಾರೆ.
ವಾರದೊಳಗೆ ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ ಸಿಗದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ: ಎಬಿವಿಪಿ ರಾಜ್ಯ ಜೊತೆ ಕಾರ್ಯದರ್ಶಿ ಹರ್ಷಿತ್ ಕೊಯ್ಲ: ಮುಂದಿನ ಒಂದು ವಾರದೊಳಗೆ ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ಸಿಗಬೇಕು. ಇಲ್ಲದಿದ್ದರೆ ಎಬಿವಿಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಎಬಿವಿಪಿ ರಾಜ್ಯ ಜೊತೆ ಕಾರ್ಯದರ್ಶಿ ಹರ್ಷಿತ್ ಕೊಯ್ಲ ಎಚ್ಚರಿಕೆ ನೀಡಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿ ನಿಖಿತ ಸಾವಿನ ಕುರಿತು ಸಾಕಷ್ಟು ಗೊಂದಲಗಳಿದ್ದು, ಇದಕ್ಕೆ ಸ್ಪಷ್ಟನೆ ಸಿಗಬೇಕೆಂಬ ಉದ್ದೇಶದಿಂದ ನಾವು ಪ್ರತಿಭಟನೆ ನಡೆಸಿದ್ದೇವೆ. ಸಾವಿನ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಡಿಎಚ್ ಒ ಹಾಗೂ ಡಿಸಿಗೆ ಮನವಿ ಕೊಡುತ್ತೇವೆ ಎಂದರು.
ವಿದ್ಯಾರ್ಥಿನಿ ನಿಖಿತ ಸಾವಿನ ಬಗ್ಗೆ ಆಸ್ಪತ್ರೆಯವರು ದಿಕ್ಕು ತಪ್ಪಿಸಿದ್ದಾರೆ- ಸಂತೋಷ್ ಕುಲಾಲ್ ಪಕ್ಕಾಲು ಆರೋಪ: ವಿದ್ಯಾರ್ಥಿನಿ ನಿಖಿತ ಸಾವಿನ ಘಟನೆ ನೋವಿನ ಸಂಗತಿ. ಕುಟುಂಬಕ್ಕೆ ಪರಿಹಾರ ಕೊಡುವ ನಿಟ್ಟಿನಲ್ಲಿ ಆಸ್ಪತ್ರೆ ಯವರು ಸರಿಯಾದ ಸ್ಪಷ್ಟೀಕರಣ ನೀಡಿಲ್ಲ. ಈಗಾಗಲೇ ಪ್ರಕರಣದ ದಿಕ್ಕು ತಪ್ಪಿಸಿದ್ದಾರೆ. ವಿದ್ಯಾರ್ಥಿನಿ ಮೃತಪಟ್ಟ ಬಳಿಕ ಕುಟುಂಬಕ್ಕೆ ಹಾಗೂ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಅದೊಂದು ಗೊಂದಲ ಇನ್ನೂ ಕೂಡ ಕಾಡುತಿದೆ ಎಂದು ಕುಂಬಾರರ ಗುಡಿಕೈಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು ಹೇಳಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕುಲಾಲ್ ಸಂಘದ ವತಿಯಿಂದ ಎಸ್ಪಿ, ಡಿಎಚ್ಒ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡುತ್ತೇವೆ. ವಿದ್ಯಾರ್ಥಿನಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡದಿದ್ರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದರು.