ಬೈಂದೂರು: ಕ್ಷಿಪಣಿ ಮಾದರಿಯ ವಸ್ತು ಪತ್ತೆ, ಭಯಭೀತರಾದ ಸ್ಥಳೀಯರು!
ಉಡುಪಿ: ಬೈಂದೂರಿನ ಶಿರೂರು ಸಮೀಪದ ಕಳಿಹಿತ್ಲು ಸಮುದ್ರ ತೀರದಲ್ಲಿ ಮಂಗಳವಾರ ಕ್ಷಿಪಣಿ ಮಾದರಿಯ ವಸ್ತುವೊಂದು ಪತ್ತಯಾಗಿದ್ದು, ಇದನ್ನು ಕಂಡ ಸ್ಥಳೀಯರು ಒಮ್ಮೆ ಭಯಭೀತರಾಗಿದ್ದರು.
ಸುಮಾರು 10 ಅಡಿ ಉದ್ದವಿರುವ ಕೆಂಪು ಬಣ್ಣದ ಉಪಕರಣವನ್ನು ಕಂಡು ಸ್ಥಳೀಯರು ಕರಾವಳಿ ಕಾವಲು ಪಡೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಸಿಬ್ಬಂದಿ ವಸ್ತುವನ್ನು ವಶಕ್ಕೆ ತೆಗೆದುಕೊಂಡರು.
ಕರಾವಳಿ ಕಾವಲುಪಡೆಯ ಎಸ್‌ಪಿ ಆರ್.ಚೇತನ್ ಅವರಲ್ಲಿ ಮಾತನಾಡಿಸಿದಾಗ, ಇದೊಂದು ಹಡಗಿನ ದಿಕ್ಕು ಸೂಚಕ ವಸ್ತುವಿನಂತೆ ಕಾಣುತ್ತಿದೆ. ಸಾಮಾನ್ಯವಾಗಿ ಬಂದರಿನ ಸಮೀಪದಲ್ಲಿ ಇಂತಹ ಉಪಕರಣವನ್ನು ಅಳವಡಿಸಲಾಗುತ್ತದೆ. ಹಡಗುಗಳು ಬಂದರು ತಲುಪಲು ಈ ಉಪಕರಣಗಳು ಸಹಾಯ ಮಾಡುತ್ತವೆ ಎಂದು ತಿಳಿಸಿದ್ದಾರೆ.