‘ರಾಷ್ಟ್ರದ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು’ ಯುಎಸ್ ಕಾಂಗ್ರೆಸ್ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ
ವಾಷಿಂಗ್ಟನ್: ಭಾರತದ ಮುಂದೆ ತಮ್ಮ ದೇಶದ ನಾಯಕರ ಮಧ್ಯೆ ಬಾಂಧವ್ಯವನ್ನು ಸಂಭ್ರಮಿಸಲು ಒಗ್ಗೂಡಿದ ಯುಎಸ್ ಕಾಂಗ್ರೆಸ್ ಸದಸ್ಯರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ವಿಚಾರಗಳು ಬಂದಾಗ ನಮ್ಮ ನಮ್ಮ ಮನೆಯೊಳಗೆ ಪೈಪೋಟಿ ಸ್ಪರ್ಧೆ ಇರಬೇಕೆ ಹೊರತು ರಾಷ್ಟ್ರದ ವಿಷಯ ಬಂದಾಗ ನಾವೆಲ್ಲರೂ ಒಂದಾಗಬೇಕು ಎಂದಿದ್ದಾರೆ.
ಭಾರತೀಯ ಕಾಲಮಾನ ನಿನ್ನೆ ಗುರುವಾರ ಸಾಯಂಕಾಲ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಯುಎಸ್ ಕಾಂಗ್ರೆಸ್ ಸದಸ್ಯರ ಬಗ್ಗೆ ಮಾತನಾಡುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪರೋಕ್ಷವಾಗಿ ಪ್ರಧಾನಿ ಮೋದಿಯವರು ಟೀಕಿಸಿದರೇ ಎಂಬ ಅನುಮಾನ ಅವರ ಮಾತುಗಳ ಧಾಟಿಯಿಂದ ಕೇಳಿಬರುತ್ತಿದೆ.
ರಾಹುಲ್ ಗಾಂಧಿ ತಮ್ಮ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಆಗಾಗ್ಗೆ ಟೀಕೆ ಮಾಡುವುದುಂಟು. ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿಯವರು ಭಾಷಣದಲ್ಲಿ ಮೋದಿ ಸರ್ಕಾರದ ನೀತಿಗಳು, ಸರ್ಕಾರ ವಿಚಾರಗಳನ್ನು ನಿಭಾಯಿಸುವ ರೀತಿಗಳನ್ನು ಟೀಕಿಸಿದ್ದರು. ವಿದೇಶಗಳಿಗೆ ಹೋದಾಗ ವಿದೇಶಿಯರ ಮುಂದೆ ರಾಹುಲ್ ಗಾಂಧಿ ಈ ರೀತಿ ಮಾತನಾಡಬಾರದು, ಟೀಕಿಸಬಾರದು ಎಂದು ಅನೇಕರು ಹೇಳುವುದುಂಟು.
ನಿನ್ನೆ ಮೋದಿಯವರು ಯುಎಸ್ ಕಾಂಗ್ರೆಸ್ ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಾ, ಆಲೋಚನೆಗಳು ಮತ್ತು ಸಿದ್ಧಾಂತದ ಚರ್ಚೆಯನ್ನು ಅರ್ಥಮಾಡಿಕೊಳ್ಳಬಲ್ಲೆ. ನೀವು ಇಂದು ಒಟ್ಟಿಗೆ ಸೇರಿರುವುದನ್ನು ನೋಡಲು ನನಗೆ ಸಂತೋಷವಾಗಿದೆ, ವಿಶ್ವದ ಎರಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಬಾಂಧವ್ಯವನ್ನು ಆಚರಿಸಲು ನಾವೆಲ್ಲರೂ ಇಂದು ಇಲ್ಲಿ ಸೇರಿದ್ದೇವೆ.
ಅಮೆರಿಕಕ್ಕೆ ಉಭಯಪಕ್ಷೀಯ ಒಮ್ಮತದ ಅಗತ್ಯವಿರುವಾಗ ಸಹಾಯ ಮಾಡಲು ನಾನು ಸಿದ್ದನಿದ್ದು ಅದಕ್ಕೆ ನನಗೆ ಸಂತೋಷವಾಗುತ್ತದೆ. ನಮ್ಮ ಮನೆಯೊಳಗೆ ವೈಚಾರಿಕವಾಗಿ ಭಿನ್ನಾಭಿಪ್ರಾಯ ಸ್ಪರ್ಧೆಗಳು ಏನೇ ಇರಬಹುದು. ಆದರೆ, ಆದರೆ ರಾಷ್ಟ್ರದ ವಿಚಾರ ಬಂದಾಗ ನಾವು ಒಂದಾಗಬೇಕು. ಅದನ್ನು ನೀವು ಮಾಡಬಹುದು ಎಂದು ತೋರಿಸಿಕೊಟ್ಟಿದ್ದೀರಿ ಎಂದರು.
ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ಕೆವಿನ್ ಮೆಕಾರ್ಥಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಪ್ರಜಾಪ್ರಭುತ್ವ ದೇಶದ ಪ್ರಜೆಯಾಗಿ ಒಂದು ವಿಷಯ ನಾನು ಅರ್ಥ ಮಾಡಿಕೊಳ್ಳಬಲ್ಲೆ. ಸ್ಪೀಕರ್ ಅವರೇ ನಿಮ್ಮ ಕೆಲಸ ಕಠಿಣವಾದದ್ದು. ಉತ್ಸಾಹ, ಮನವೊಲಿಕೆ ಮತ್ತು ನೀತಿ ಹೋರಾಟಕ್ಕೆ ಸಿದ್ಧವಿರುವವರು ಮಾಡುವ ಕೆಲಸ ನಿಮ್ಮದು ಎಂದರು.