ಆಕಾಶ, ಭೂಮಿ, ಪಾತಾಳವನ್ನೂ ಬಿಡದೆ ಕಾಂಗ್ರೆಸ್‌ನಿಂದ ಹಗರಣ- ಸಿ.ಟಿ.ರವಿ
ಉಡುಪಿ: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಆಕಾಶ, ಭೂಮಿ, ಪಾತಾಳದಲ್ಲೂ ಹಗರಣಗಳನ್ನು ನಡೆಸಿತ್ತು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಬೆಲೆ ಏರಿಕೆಯ ಮೂಲಕ ಕಾಂಗ್ರೆಸ್ ಜನರಿಗೆ ಮಹಾ ಮೋಸ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.
ಅವರು ಜೂ.22ರಂದು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಉಡುಪಿಯ ಹೋಟೆಲ್ ಕಿದಿಯೂರು ಶೇಷಶಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉಡುಪಿ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಸದ್ದಿಲ್ಲದೆ ಬೆಲೆ ಏರಿಕೆಗೆ ಮುಂದಾಗಿದ್ದು ವಿದ್ಯುತ್ ಹಾಗೂ ಮದ್ಯದ ದರ ಹೆಚ್ಚಿಸಿದೆ. ಮುಂದೆ ನೋಂದಣಿ ಶುಲ್ಕ ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಮೋದಿ ಹೆಸರಲ್ಲಿ ಸಿದ್ಧರಾಮಯ್ಯ ಜಾತ್ರೆ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜ್ಯಕ್ಕೆ ಅಕ್ಕಿ ನೀಡುತ್ತಿದ್ದರೂ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಯೋಜನೆ ಕೊಟ್ಟಿದ್ದು ನಾನೇ ಎಂದು ಹೇಳಿಕೊಳ್ಳುತ್ತಿದ್ದರು. ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ದೂರುತ್ತಿದ್ದಾರೆ. ಮೋದಿ ಹೆಸರಿನಲ್ಲಿ ಸಿದ್ದರಾಮಯ್ಯ ಜಾತ್ರೆ ಮಾಡಲು ಹೊರಟಿದ್ದಾರೆ.
ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಬೇಕು. ಕೊಟ್ಟ ಮಾತಿಗೆ ತಪ್ಪಿದರೆ ಮತದಾರ ಸಹಿಸುವುದಿಲ್ಲ ಎಂದು ಸಿ.ಟಿ. ರವಿ ಟೀಕಿಸಿದರು.
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ನಿರ್ಧಾರದ ಮೂಲಕ ಕಾಂಗ್ರೆಸ್ ಸರ್ಕಾರ ಔರಂಗಜೇಬನ ಆಡಳಿತ ನಡೆಸುತ್ತಿದ್ದು, ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಮಾಡಿದೆ. ಅದಕ್ಕೆ ಉತ್ತರವಾಗಿ ಶಿವಾಜಿ, ಸಂಭಾಜಿ, ಗುರು ಗೋವಿಂದರ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತರ ನೀಡಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಸ್ಕ್ಯಾಮ್ ಬದಲು ಸ್ಕೀಮ್:
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 9 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ಸಿನ ಸ್ಕ್ಯಾಮ್ ಗಳ ಬದಲಾಗಿ ಸ್ಕೀಮ್ (ಯೋಜನೆ)ಗಳಿಗೆ ಒತ್ತು ನೀಡಲಾಯಿತು. ಜಿ.ಎಸ್.ಟಿ ತೆರಿಗೆ ಬರುವ ಮುಂಚೆ, ದೇಶದಲ್ಲಿ 30 ಬಗೆಯ ನಾನ ತೆರಿಗೆಗಳು ಜಾರಿಯಲ್ಲಿದ್ದವು. ಆದರೆ ಈಗ ಕೇವಲ ಜಿ.ಎಸ್.ಟಿ ಮಾತ್ರ ತೆರಿಯ ರೂಪದಲ್ಲಿದೆ. ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದುಗೊಳಿಸಲು ಪ್ರಧಾನಿ ಮೋದಿಯವರ ನೇತೃತ್ವದ ಸರಕಾರದಿಂದ ಮಾತ್ರ ಸಾಧ್ಯವಾಯಿತು ಎಂದರು.
ವಿರೋಧಿಗಳಿಂದ ಟೂಲ್ ಕಿಟ್ ರಾಜಕಾರಣದ ಷಡ್ಯಂತ್ರಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಅದರ ಭಾಗವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ವಿದೇಶದಲ್ಲಿ ಭಾರತದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವನ್ನು ಸ್ವಾಭಿಮಾನದ ಗುರುತಾಗಿ ಆತ್ಮನಿರ್ಭರ ಮಾಡಬೇಕು; ವಿಶ್ವಗುರುವನ್ನಾಗಿಸ ಬೇಕೆನ್ನುವ ದಿಕ್ಕಿನಲ್ಲಿ ದೇಶ ಮುಂದಡಿ ಇಡುತ್ತಿದೆ.
ಜನಧನ್ ನಿಂದ ತೊಡಗಿ ಉಜ್ವಲ, ಮುದ್ರಾ, ಕಿಸಾನ್ ಸಮ್ಮಾನ್, ಪಿಎಂ ಆವಾಸ್, ಸ್ಟಾಂಡ್ ಅಪ್, ಸ್ಟಾರ್ಟ್ ಅಪ್, ಆಯುಷ್ಮಾನ್ ಭಾರತ್ ಮುಂತಾದ ಬಡವರು, ಮಹಿಳೆಯರು, ಹಿಂದುಳಿದವರ ಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಸಂವಿಧಾನದ 371ನೇ ವಿಧಿ ರದ್ದು, ದೇಶದ ಭವ್ಯ ಸಾಂಸ್ಕೃತಿಕ ಪುನರುತ್ಥಾನ. 390 ಹೊಸ ವಿಶ್ವವಿದ್ಯಾಲಯಗಳು, 225 ಮೆಡಿಕಲ್ ಕಾಲೇಜು, 23 ಏಮ್ಸ್, ತಲಾ 7 ಐಐಟಿ, ಐಐಎಂ, 75 ವಿಮಾನ ನಿಲ್ದಾಣಗಳು, ಡಿಫೆನ್ಸ್ ಕಾರಿಡಾರ್, ಕೈಗಾರಿಕಾ ಕಾರಿಡಾರ್, ಸಾಗರ ಮಾಲಾ ಯೋಜನೆ ಅನುಷ್ಠಾನ ಹೀಗೆ ಬಿಜೆಪಿ ಆಡಳಿತದಲ್ಲಿ ದೇಶ ಪ್ರಗತಿಯ ಹಾದಿಯಲ್ಲಿ ವೇಗದಲ್ಲಿ ಸಾಗುತ್ತಿದೆ.
ಬಿಜೆಪಿ ಆಡಳಿತದಲ್ಲಿ ಬ್ಯಾಂಕ್ ಗಳು ಉದ್ಯಮಿಗಳಿಗೆ ಶಿಫಾರಸು ಪತ್ರ ನೋಡಿ ಸಾಲ ಕೊಡುವುದಿಲ್ಲ. ಬದಲಾಗಿ ವ್ಯವಹಾರ, ಸಿಬಿಲ್ ಸ್ಕೋರ್ ನೋಡಿ ಸಾಲ ಕೊಡುತ್ತವೆ. ಎಂದರು.
ಓಲೈಕೆಗಾಗಿ ಪಠ್ಯ ಪರಿಷ್ಕರಣೆ:
ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸಿದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ. ಬಲಾತ್ಕಾರ, ಆಮಿಷದ ಮತಾಂತರವಾಗದಂತೆ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದ್ದೆವು. ಆತ್ಮಸಾಕ್ಷಿಗೆ ಒಪ್ಪಿ ಮತಾಂತರ ವಾಗುವವರಿಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅದಕ್ಕೆ ಈ ಕಾಯ್ದೆ ಅಡ್ಡಿಪಡಿಸಿಲ್ಲ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವಂತೆ ಪೋಷಕರಾಗಲಿ, ವಿದ್ಯಾರ್ಥಿಗಳಾಗಲಿ, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳಿಂದ ಒತ್ತಾಯ ಇಲ್ಲದಿದ್ದರೂ ಎಡಪಂಥೀಯರ ಓಲೈಕೆಗಾಗಿ ಪಠ್ಯ ಪರಿಷ್ಕರಣೆ ಮಾಡುವ ಮೂಲಕ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ.
ಹೋರಾಟಗಾರರ ಕುರಿತು ಚಕ್ರವರ್ತಿ ಸೂಲಿಬೆಲೆ ಲೇಖನ, ಹೆಡಗೆವಾರ್ ಅವರ ರಾಷ್ಟ್ರಾಭಿಮಾನ ಮೂಡಿಸುವ ಪಠ್ಯ ಕೈಬಿಡಲಾಗುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಪಠ್ಯ ಪರಿಷ್ಕರಣೆ ಮಾಡಿದರೂ ಕೈಬಿಟ್ಟಿರುವ ಪಾಠಗಳನ್ನು ಫೋಷಕರು ಮಕ್ಕಳಿಗೆ ಬೋಧಿಸಿ. ರಾಷ್ಟ್ರಾಭಿಮಾನದ ವಿಚಾರಗಳನ್ನು ಪಠ್ಯದಿಂದ ತೆಗೆದರೂ ಜನಮಾನಸದಿಂದ ಅಳಿಸಿಹಾಕಲು ಸಾಧ್ಯವಿಲ್ಲ ಎಂದರು.
ಬಡವರ ಹೆಸರಲ್ಲಿ ರಾಜಕಾರಣ:
ವಿದ್ಯುತ್ ದರ ಏರಿಕೆಯಾಗಿದ್ದು ಬಿಜೆಪಿ ಅವಧಿಯಲ್ಲಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಕೆಇಆರ್ಸಿ ದರ ಏರಿಕೆ ಪ್ರಸ್ತಾವವನ್ನು ಮೇ ಅಂತ್ಯದಲ್ಲಿ ಅನುಮೋದಿಸಿದ್ದು ಕಾಂಗ್ರೆಸ್ ಸರ್ಕಾರ ಎಂದರು.
ಗ್ಯಾರಂಟಿ ಘೋಷಣೆ ಮಾಡಿದಾಗ ಇಲ್ಲದ ಷರತ್ತುಗಳನ್ನು ಈಗ ಹಾಕಲಾಗಿದೆ. 10 ಕೆ.ಜಿ. ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರದ ಮೇಲೆ ವೃಥಾ ಆರೋಪ ಮಾಡುತ್ತಾ ಬಡವರ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಉಚಿತ 5 ಕೆ.ಜಿ. ಅಕ್ಕಿ ಹೊರತಾಗಿ, ರಾಜ್ಯ ಸರಕಾರವೇ 10 ಕೆ.ಜಿ. ಅಕ್ಕಿ ಸಹಿತ ಒಟ್ಟು 15 ಕೆ.ಜಿ. ಅಕ್ಕಿಯನ್ನು ರಾಜ್ಯದ ಜನತೆಗೆ ನೀಡಬೇಕು ಎಂದು ಕಾಗೇರಿ ವಾಗ್ದಾಳಿ ನಡೆಸಿದರು.
ಮಾಜಿ ಸಚಿವರಾದ ಅರಗ ಜ್ಞಾನೇಂದ್ರ, ಪ್ರಮೋದ್ ಮಧ್ವರಾಜ್ ಮಾತನಾಡಿ ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಜನಮಾನಸದಲ್ಲಿ ಪ್ರಚಲಿತ ಗೊಳಿಸುವ ಮೂಲಕ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಮಗದೊಮ್ಮೆ ದೇಶದ ಪ್ರಧಾನಿಯನ್ನಾಗಿಸಲು ಸಂಘಟಿತ ಪ್ರಯತ್ನ ಮಾಡಬೇಕಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಲ್ಲೇ ಜಿಲ್ಲೆಯ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲಿ ಮುಂಚೂಣಿ ಸ್ಥಾನ ಪಡೆಯಲು ಶ್ರಮಿಸಿರುವ ಸಮಸ್ತ ಕಾರ್ಯಕರ್ತರಿಗೆ ಅಭಿನಂದನೆಗಳು. ಇದೇ ರೀತಿಯ ಸ್ಪೂರ್ತಿಯಿಂದ ಮುಂದಿನ ತಾ.ಪಂ., ಜಿ.ಪಂ. ಸಹಿತ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಭರ್ಜರಿ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸೋಣ ಎಂದರು.
ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವ ಪ್ರಸಾದ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಶಾಸಕರಾದ ಯಶ್ಪಾಲ್ ಎ.ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಾಜಿ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿ, ಸದಾನಂದ ಉಪ್ಪಿನಕುದ್ರು ಮತ್ತು ಮನೋಹರ್ ಎಸ್. ಕಲ್ಮಾಡಿ ನಿರೂಪಿಸಿದರು. ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ವಂದಿಸಿದರು.