ವೈದ್ಯರ ನಿರ್ಲಕ್ಷ್ಯ ಆರೋಪ- ಡಿಪ್ಲೋಮಾ ವಿದ್ಯಾರ್ಥಿನಿ ಸಂಶಯಾಸ್ಪದ ಸಾವು
ಉಡುಪಿ,ಜೂ.22(ಉಡುಪಿ ಟೈಮ್ಸ್ ವರದಿ) ಇಲ್ಲಿನ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಎರ್ಮಾಳ್‌ನ ಕೆಮ್ಮುಂಡೆಲ್‌ನ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಸಾವಿನ ತನಿಖೆಗೆ ಆಗ್ರಹಿಸಿ ಶುಕ್ರವಾರ ಎಬಿವಿಪಿ ಸಂಘಟನೆ ಆಸ್ಪತ್ರೆಯ ಎದುರು ಪ್ರತಿಭಟನೆಗೆ ಕರೆ ಕೊಟ್ಟಿದೆ.
ಎರ್ಮಾಳ್‌ನ ಜನಾರ್ದನ ಮೂಲ್ಯ ಹಾಗೂ ಶೋಭಾ ಅವರ ಏಕೈಕ ಪುತ್ರಿ ನಿಖಿತ ಕುಲಾಲ್ (20)ಮೃತಪಟ್ಟ ದುರ್ದೈವಿ.
ಜೂ.13ರ ಸೋಮವಾರ ರಾತ್ರಿ ನಿಖಿತ ವಿಪರೀತ ವಾಂತಿಯಿಂದ ಬಳಲಿ ಅಸ್ವಸ್ಥಗೊಂಡಿದ್ದರು. ಮರುದಿನ ಮುಂಜಾನೆ 4.30 ಮನೆಯವರು ಆಕೆಯನ್ನು ಉಡುಪಿಯ ಸಿಟಿಯ ಆಸ್ಪತ್ರೆಗೆ ದಾಖಲಿಸಿದ್ದರು.
ಬಳಿಕ ಪ್ರತಿದಿನ ಎಂಬಂತೆ ನಾಲ್ಕೈದು ಸ್ಕ್ಯಾನಿಂಗ್ ನಡೆಸಿದ ವೈದ್ಯರು ಆಕೆಯ ಆರೋಗ್ಯ ಸಮಸ್ಯೆ ಪತ್ತೆ ಹಚ್ಚಲು ವಿಫಲವಾಗಿದ್ದಾರೆ ಎಂದು ಮೃತ ನಿಖಿತ ಚಿಕ್ಕಮ್ಮ ಶೈಲಜಾ “ಉಡುಪಿ ಟೈಮ್ಸ್“ಗೆ ತಿಳಿಸಿದ್ದಾರೆ.
ಶನಿವಾರ ರಾತ್ರಿ 12 ಗಂಟೆಗೆ ಆಸ್ಪತ್ರೆಯಿಂದ ನಿಖಿತ ತಂದೆಗೆ ಮಗಳ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು ತಕ್ಷಣವೇ ಬರುವಂತೆ ಕರೆ ಬಂದಿತ್ತು.
ಮಗಳ ದೇಹ ಸ್ಥಿತಿ ಗಂಭೀರವಾಗಿರುವುದನ್ನು ಕಂಡ ಜನಾರ್ದನ ಅವರು ಮಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ನಾವು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆ ಕರೆದುಕೊಂಡು ಹೋಗುವುದಾಗಿ ಕೇಳಿಕೊಂಡರು ಆಸ್ಪತ್ರೆಯ ವೈದ್ಯರು ಒಪ್ಪಲಿಲ್ಲ.
ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ನಿಖಿತ ರವಿವಾರ ಮೃತಪಟ್ಟಿದ್ದರು. ನಿಖಿತ ಸಾವಿಗೆ ಆಸ್ಪತ್ರೆಯ ನಿರ್ಲಕ್ಷವೇ ಕಾರಣ ಎಂದು ಆಕೆಯ ಚಿಕ್ಕಮ್ಮ ಶೈಲಜಾ ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯ ಚಿಕ್ಕಮ್ಮ ಮಾತನಾಡಿರುವ ವಾಯ್ಸ್ ರೆಕಾರ್ಡ್ ವೈರಲ್.. ಆಸ್ಪತ್ರೆಯ ನಿರ್ಲಕ್ಷ್ಯ ಹಾಗೂ ವೈದ್ಯರು ನಿಖಿತ ಆರೋಗ್ಯ ಸ್ಥಿತಿ ಬಿಗಾಡಾಯಿಸಿದರೂ ಬೇರೊಂದು ಆಸ್ಪತ್ರೆಗೆ ಕಳುಹಿಸಿ ಕೊಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ರೆಕಾರ್ಡ್ ವೈರಲ್ ಆಗಿದ್ದು. ಆಸ್ಪತ್ರೆಯ ಬೇಜವಾಬ್ದಾರಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಆಸ್ಪತ್ರೆಯ ಮುಖ್ಯಸ್ಥರಿಂದ ಸ್ಪಷ್ಟನೆ ಕೇಳಲು ಉಡುಪಿ ಟೈಮ್ಸ್ ಪ್ರಯತ್ನಿಸಿದರೂ ಸಮರ್ಪಕವಾಗಿ ಸ್ಪಂದಿಸಿಲ್ಲ.
ಶುಕ್ರವಾರ ಆಸ್ಪತ್ರೆಯ ಎದುರು ಎಬಿವಿಪಿ ಪ್ರತಿಭಟನೆ: ಕೆಪಿಟಿ ದ್ವೀತಿಯ ವರ್ಷದ ಡಿಪ್ಲೋಮ ವಿದ್ಯಾರ್ಥಿನಿಯ ಸಾವು ಅನೇಕ ಗೊಂದಲದಿಂದ ಕೂಡಿದ್ದು, ಸೂಕ್ತ ತನಿಖೆ ನಡೆಸಿ ನಿಖಾತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುವುದಾಗಿ ಎಬಿವಿಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.