ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ವಿದ್ಯಾರ್ಥಿಗಳ ಬ್ಯಾಗ್ ತೂಕ ಇಳಿಸಿದ ಶಿಕ್ಷಣ ಇಲಾಖೆ
ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸುವ ಬಗ್ಗೆ ಶಿಕ್ಷಣ ಇಲಾಖೆ ಬುಧವಾರ ಮಹತ್ವದ ಆದೇಶ ಹೊರಡಿಸಿದೆ.
1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕವನ್ನು ಶಿಕ್ಷಣ ಇಲಾಖೆ ನಿಗದಿ ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಸಂಬಂಧ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಈ ನಿಯಮ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ. ಕಡ್ಡಾಯವಾಗಿ ಎಲ್ಲಾ ಶಾಲೆಗಳು ಈ ನಿಯಮವನ್ನು ಪಾಲನೆ ಮಾಡಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ.
ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಂತೆ 1ರಿಂದ 2ನೇ ತರಗತಿಯ ಮಕ್ಕಳಿಗೆ 1.5ರಿಂದ 2 ಕೆ.ಜಿ, 3ರಿಂದ 5ನೇ ತರಗತಿ 2ರಿಂದ 3 ಕೆ.ಜಿ, 6ರಿಂದ 8 ತರಗತಿ 3ರಿಂದ 4 ಕೆ.ಜಿ ಹಾಗೂ 9ರಿಂದ 10ನೇ ತರಗತಿಯ ಮಕ್ಕಳಿಗೆ 4ರಿಂದ 5 ಕೆ.ಜಿ.ವರೆಗೆ ಶಾಲಾ ಬ್ಯಾಗ್ ತೂಕ ನಿಗದಿ ಮಾಡಲಾಗಿದೆ.
ಶಾಲಾ ಶಿಕ್ಷಕರು ಅಗತ್ಯಕ್ಕೆ ತಕ್ಕಂತೆ ಅಂದಿನ ಪಠ್ಯಪುಸ್ತಕ ಹಾಗೂ ಇತರೆ ಕಲಿಕಾ ಸಾಮಗ್ರಿಗಳನ್ನು ಮಾತ್ರ ತರುವಂತೆ ನೋಡಿಕೊಳ್ಳಬೇಕು. 200 ಪುಟ ಮೀರದ ನೊಟ್‌ಬುಕ್ ಬಳಸಲು ಸೂಚಿಸಬೇಕು. ಶಾಲೆಗಳಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ಬ್ಯಾಗ್ ಹೊರೆಯಿಂದ ಆಗುವ ದುಷ್ಪರಿಣಾಮಗಳನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ನಿಯಮ ಉಲ್ಲಂಘಿಸುವ ಶಿಕ್ಷಕರು, ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.