ಮಣಿಪುರದಲ್ಲಿ ‘ಗರಿಷ್ಠ ಮೌನ, ಕನಿಷ್ಠ ಆಡಳಿತ’: ಮೋದಿ ವರ್ತನೆ ಆಘಾತಕಾರಿ ಎಂದ ಕಾಂಗ್ರೆಸ್
ನವದೆಹಲಿ: ಕಳೆದ 50 ದಿನಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ ಎಂದ ಕಾಂಗ್ರೆಸ್, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಹಿಂಸಾಚಾರ ಪೀಡಿತ ರಾಜ್ಯವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ “ಸಂಪೂರ್ಣವಾಗಿ ವಿಫಲರಾಗಿದ್ದಾರೆ” ಎಂದು ಬುಧವಾರ ಆರೋಪಿಸಿದೆ.
ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು “ಗರಿಷ್ಠ ಮೌನ, ಕನಿಷ್ಠ ಆಡಳಿತ” ನಡೆಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.
“ಪ್ರಧಾನಿ ಅವರ ಅಮೆರಿಕ ಭೇಟಿಯ ಎಲ್ಲಾ ಸುದ್ದಿಗಳ ನಡುವೆ ಇಂದು ಮಣಿಪುರದ ನೋವು, ಸಂಕಟ ಮತ್ತು ಹಿಂಸಾಚಾರ 50ನೇ ದಿನಕ್ಕೆ ಕಾಲಿಟ್ಟಿದೆ ಎಂಬುದನ್ನು ನಾವು ನೆನಪಿಸಿಕೊಳ್ಳೋಣ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
“ಹಲವು ವಿಷಯಗಳ ಬಗ್ಗೆ ‘ಬುದ್ಧಿ’ ಹೇಳುವ ಪ್ರಧಾನಿ ಮೋದಿ, ದುಃಖದಿಂದ ಆವರಿಸಿರುವ ರಾಜ್ಯದ ಬಗ್ಗೆ ಒಂದು ಮಾತನ್ನೂ ಹೇಳಿಲ್ಲ. ಸಮಯ ಕೇಳಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಪಾಯಿಂಟ್ ಮೆಂಟ್ ನೀಡಿಲ್ಲ ಮತ್ತು ಯಾವುದೇ ಸೂಚನೆ ಸಹ ನೀಡಿಲ್ಲ. ಅವರು ಮಣಿಪುರದ ಕಾಳಜಿ ವಹಿಸುತ್ತಾರೋ ಅಥವಾ ಇಲ್ಲವೋ ಎಂಬ ಬಗ್ಗೆ ಯಾವುದೇ ಸೂಚನೆ ನೀಡುತ್ತಿಲ್ಲ” ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
“ಬಿಕ್ಕಟ್ಟಿನ ಸಮಯದಲ್ಲಿ ಮಣಿಪುರವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವ ಮೂಲಕ ಅವರು ಭಾರತದ ಪ್ರಧಾನಿ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅವರ ನಡವಳಿಕೆಯು ಅತ್ಯಂತ ಆಘಾತಕಾರಿ ಮತ್ತು ಗ್ರಹಿಕೆಗೆ ಮೀರಿದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.