ಗ್ಯಾರಂಟಿ ಜಾರಿಗೊಳಿಸಲು ವಿಫಲವಾಗಿರುವ ಕಾಂಗ್ರೆಸ್ಸಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ- ಮಹೇಶ್ ಠಾಕೂರ್
ಉಡುಪಿ: ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿಯನ್ನು ಫ್ರೀಯಾಗಿ ನೀಡುತ್ತೇವೆ ಎಂದು ಬೊಗಳೆ ಬಿಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಮುಖಂಡರು ತಾವು ಘೋಷಿಸಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸಲು ವಿಫಲಗೊಂಡು, ಇದೀಗ ಅಕ್ಕಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಒತ್ತಾಯಿಸಲು ನಾಚಿಕೆಯಾಗುವುದಿಲ್ಲವೆ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ಉಚಿತ 10 ಕೆ.ಜಿ. ಅಕ್ಕಿ ನೀಡುತ್ತೇವೆ ಎಂದು ಗ್ಯಾರಂಟಿ ಘೋಷಣೆ ಮಾಡುವ ಮೊದಲು ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿದ್ದಾರಾ? ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ಎಲ್ಲ 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸುತ್ತೇವೆ ಎಂದು ಡಂಗುರ ಸಾರಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು 1 ತಿಂಗಳು ಕಳೆದರೂ ತಮ್ಮ ಉಚಿತಗಳ ಗ್ಯಾರಂಟಿಯನ್ನು ಜಾರಿಗೊಳಿಸಲಾಗದೆ ಕಂಗೆಟ್ಟು ಮುಖಭಂಗ ಎದುರಿಸುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ಮೇಲೆ ವೃಥಾ ಆರೋಪ ಹೊರಿಸುವುದು ಎಷ್ಟು ಸರಿ?.
ಇಷ್ಟೆಲ್ಲಾ ಪ್ರಹಸನ ಮಾಡುವ ಬದಲು ಕಾಂಗ್ರೆಸ್ ಸರಕಾರ ರಾಜ್ಯದ ರೈತರಿಂದ ಅಕ್ಕಿಯನ್ನು ಖರೀದಿಸಿ ಕೇಂದ್ರದ ಉಚಿತ 5 ಕೆ.ಜಿ. ಅಕ್ಕಿಯ ಜೊತೆಗೆ ರಾಜ್ಯದ 10 ಕೆ.ಜಿ. ಅಕ್ಕಿಯನ್ನು (ಒಟ್ಟು 15 ಕೆಜಿ) ಜನತೆಗೆ ವಿತರಿಸಲು ಯಾಕೆ ಮುಂದಾಗುತ್ತಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರಸ್ತುತ ಕರ್ನಾಟಕ ರಾಜ್ಯದ ಪ್ರತೀ ಬಿಪಿಎಲ್ ಕುಟುಂಬಗಳಿಗೆ ತಲಾ 5 ಕೆ.ಜಿ. ಅಕ್ಕಿ ಮತ್ತು ಅಂತ್ಯೋದಯ ಕಾರ್ಡುದಾರ ಕುಟುಂಬಗಳಿಗೆ 35 ಕೆ.ಜಿ. ಅಕ್ಕಿಯನ್ನು ಪ್ರತೀ ತಿಂಗಳು ಉಚಿತವಾಗಿ ವಿತರಿಸುತ್ತಿದೆ. ಈ ಹಿಂದೆಯೂ ಕೇಂದ್ರ ಸರಕಾರ ಪ್ರತೀ ಕೆ.ಜಿ. ಅಕ್ಕಿಗೆ ರೂ.29ರಂತೆ ವೆಚ್ಚ ಭರಿಸಿ ರಾಜ್ಯಕ್ಕೆ ಉಚಿತವಾಗಿ ನೀಡಿದ್ದು, ಆಗ ರಾಜ್ಯ ಸರಕಾರ ಭರಿಸಿದ ವೆಚ್ಚ ರೂ.3 ಮಾತ್ರ ಆಗಿತ್ತು. ಆ ಸಂದರ್ಭದಲ್ಲಿಯೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಕೇಂದ್ರ ಸರಕಾರ ನೀಡಿದ ಉಚಿತ ಅಕ್ಕಿಯ ಬಗ್ಗೆ ಯಾವುದೇ ಮಾಹಿತಿ ನೀಡದೆ ತಮ್ಮ ಲೇಬಲನ್ನು ಅಂಟಿಸಿ ಅದನ್ನು ತನ್ನದೇ ಅನ್ನಭಾಗ್ಯ ಯೋಜನೆ ಎಂದು ಜನರಿಗೆ ತಪ್ಪು ಮಾಹಿತಿ ನೀಡಿ, ಪುಕ್ಕಟೆ ಪ್ರಚಾರಗಳಿಸಿದ್ದನ್ನು ರಾಜ್ಯದ ಜನತೆ ಮರೆತಿಲ್ಲ.
ಪ್ರಸ್ತುತ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಅಕ್ಕಿ ರಾಜಕೀಯದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ರಾಜ್ಯಗಳಿಗೆ ಪ್ರತೀ ತಿಂಗಳು 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿರುವ ವಿಚಾರ ಜಗಜ್ಜಾಹೀರಾಗಿರುವುದು ವಾಸ್ತವ. ರಾಜ್ಯದ ಜನತೆ ಪ್ರಬುದ್ಧರಾಗಿದ್ದು ಕಾಂಗ್ರೆಸ್ಸಿನ ನಕಲಿ ಗ್ಯಾರಂಟಿಗಳ ಕರ್ಮಕಾಂಡವನ್ನು ಚೆನ್ನಾಗಿಯೇ ಅರಿತಿದ್ದಾರೆ.
ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಘೋಷಿಸಿರುವ 5 ಗ್ಯಾರಂಟಿಗಳಿಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಕಾಂಗ್ರೆಸಿಗರು ರಾಜ್ಯದ ಬಿಜೆಪಿ ಸಂಸದರು ಪ್ರಧಾನಿ ಮೋದಿಯವರ ಬಳಿ ಅಕ್ಕಿ ನೀಡುವಂತೆ ಒತ್ತಾಯಿಸಲಿ ಎಂದಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಹಿತ 135 ಕಾಂಗ್ರೆಸ್ ಶಾಸಕರು ಎಲ್ಲಿಂದ ಬೇಕಾದರೂ ಅಕ್ಕಿಯನ್ನು ಖರೀದಿಸಿ ಕೇಂದ್ರದ 5 ಕೆ.ಜಿ ಉಚಿತ ಅಕ್ಕಿಯ ಜೊತೆಗೆ ತಮ್ಮ ಗ್ಯಾರಂಟಿಯ 10 ಕೆ.ಜಿ. ಉಚಿತ ಅಕ್ಕಿಯನ್ನು ಪ್ರತ್ಯೇಕವಾಗಿ ವಿತರಿಸುವ ಎದೆಗಾರಿಕೆ ತೋರಿಸುವುದು ಉತ್ತಮ.
ಕೇವಲ ಅಧಿಕಾರವನ್ನು ಪಡೆಯುವ ಒಂದೇ ಉದ್ದೇಶದಿಂದ ಎಂದೂ ಜಾರಿಗೊಳಿಸಲಾಗದ 5 ಉಚಿತಗಳ ಗ್ಯಾರಂಟಿಯನ್ನು ಘೋಷಿಸಿ ಜನತೆಗೆ ಪಂಗನಾಮ ಹಾಕಿರುವ, ಮಾತು ತಪ್ಪಿದ ವಚನಭೃಷ್ಟ ಕಾಂಗ್ರೆಸ್ಸಿನ ಜನವಿರೋಧಿ ನೀತಿಗಳನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.