ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ಪಾಲು: ಕಾಂಗ್ರೆಸ್‌ಗೆ ಮುಖಭಂಗ

ಹುಬ್ಬಳ್ಳಿ: ತೀವ್ರ ಕುತೂಹಲದಿಂದ ಕೂಡಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನ ಬಿಜೆಪಿ ಪಾಲಾಗಿದೆ. 

ಇಂದು ನಡೆದ ಚುನಾವಣೆಯಲ್ಲಿ 46 ಮತಗಳನ್ನು ಪಡೆಯುವ ಮೂಲಕ ಮೇಯರ್ ​ಆಗಿ ಬಿಜೆಪಿಯ ವೀಣಾ ಬಾರದ್ವಾಡ್​ ಆಯ್ಕೆಯಾಗಿದ್ದರೆ, ಬಿಜೆಪಿಯ ಸತೀಶ್ ಹಾನಗಲ್ ಸಹ 46 ಮತಗಳನ್ನು ಪಡೆಯುವ ಮೂಲಕ ಉಪಮೇಯರ್​ ಆಗಿ ಚುನಾಯಿತರಾದರು. 

ಇನ್ನು ಮೇಯರ್ ಸ್ಥಾನಕ್ಕೆ ಕಾಂಗ್ರೆಸ್​​ ಪಕ್ಷದಿಂದ ಸುವರ್ಣ ಸ್ಪರ್ಧಿಸಿದ್ದು ಅವರ ಪರ 37 ಮತಗಳು ಮಾತ್ರ  ಚಲಾವಣೆಗೊಂಡಿವೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಈ ಹಿನ್ನೆಲೆಯಲ್ಲಿ ಮೇಯರ್ ಸ್ಥಾನದ ಚುನಾವಣೆಗೆ ಬಿಜೆಪಿಯಿಂದ ವೀಣಾ ಬರದ್ವಾಡ್ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್​ನಿಂದ ಸುವರ್ಣ ಅವರು ನಾಮಪತ್ರ ಸಲ್ಲಿಸಿದ್ದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಟ್ಟು ಸದಸ್ಯರ ಬಲ 82 ಆಗಿದ್ದು ಅಧಿಕಾರ ಹಿಡಿಯಲು 46 ಮತಗಳು ಬೇಕಿತ್ತು. ಬಿಜೆಪಿ ಕಾರ್ಪೊರೇಟರ್​ಗಳ ಸಂಖ್ಯೆ 39 ಇದ್ದು, ಕಾಂಗ್ರೆಸ್​​​​ 33, ಪಕ್ಷೇತರ 6, ಎಐಎಮ್ಐಎಮ್ 3, ಜೆಡಿಎಸ್ 1 ಸ್ಥಾನ ಹೊಂದಿತ್ತು. 

ಇನ್ನು 8 ಜನಪ್ರತಿನಿಧಿಗಳು, 4 ಶಾಸಕರು, 1 ಸಂಸದ, 3 ಎಂಎಲ್​ಸಿ ಪಾಲಿಕೆ ವ್ಯಾಪ್ತಿಯ ಜನಪ್ರತಿನಿಧಿಗಳು ಸೇರಿಸಿ ಒಟ್ಟು 90 ಮತಗಳಿದ್ದವು, ಇದರಲ್ಲಿ ಬಿಜೆಪಿ ಮೇಯರ್ ಅಭ್ಯರ್ಥಿ ಪರ 46 ಮತಗಳು ಚಲಾವಣೆಯಾಗಿದ್ದರೆ, ಕಾಂಗ್ರೆಸ್​ನ ಸುವರ್ಣ ಅವರ ಪರ 37 ಮತಗಳ ಚಲಾವಣೆಯಾಗಿವೆ.

Leave a Reply

Your email address will not be published. Required fields are marked *

error: Content is protected !!