ಕೆಪಿಸಿಸಿ ವಕ್ತಾರರಾಗಿ ವಿನಯ್ ಕುಮಾರ್ ಸೊರಕೆ ನೇಮಕ
ಉಡುಪಿ (ಉಡುಪಿ ಟೈಮ್ಸ್ ವರದಿ) : ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್, ಉಡುಪಿ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರು, ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿರುವ ವಿನಯಕುಮಾರ್ ಸೊರಕೆಯವರನ್ನು ಕೆಪಿಸಿಸಿ ವಕ್ತಾರರಾಗಿ ನೇಮಕ ಮಾಡಿ ಆದೇಶ ಮಾಡಿದ್ದಾರೆ. ದೃಶ್ಯ, ಮುದ್ರಣ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಸಾರ್ವಜನಿಕವಾಗಿ ಮಹತ್ವದ ವಿಷಯಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಚರ್ಚೆಯ ನೇತೃತ್ವವನ್ನು ಮಾಜಿ ಸಚಿವ ಸೊರಕೆಯವರು ವಹಿಸಿರುವುದು ಕೆಪಿಸಿಸಿ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ತಮಗಿರುವ ಅನುಭವ ತಿಳಿವಳಿಕೆಯೊಂದಿಗೆ ವಿಷಯವನ್ನು ಸಮರ್ಥವಾಗಿ ಮಂಡಿಸುವ ಸಾಮರ್ಥ್ಯವನ್ನು ಗಮನಿಸಿ ನಿಮ್ಮನ್ನು ಕೆಪಿಸಿಸಿ ವಕ್ತಾರರಾಗಿ ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇಮಕ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಕುಸಿತದ ಹಾದಿಯಲ್ಲಿದ್ದು, ಒಗ್ಗಟ್ಟಿನ ನಾಯಕತ್ವದ ಕೊರತೆ ಕಾಣುತ್ತಿದೆ. ಎಐಸಿಸಿಯ ಮತ್ತು ಜಿಲ್ಲೆಯ ಪ್ರಭಾವಿ ನಾಯಕ ಆಸ್ಕರ್ ಫೆರ್ನಾಂಡಿಸ್ ಅಸೌಖ್ಯದಲ್ಲಿರುವುದು, ಮತ್ತೋರ್ವ ಹಿರಿಯ ನಾಯಕ ಪ್ರತಾಪಚಂದ್ರ ಶೆಟ್ಟಿ ವಿಧಾನ ಪರಿಷತ್ ಸಭಾಪತಿಯಾಗಿರುವುದರಿಂದ ಪಕ್ಷ ಸಂಘಟನೆಯ ನೇತೃತ್ವ ವಹಿಸುವವರು ಯಾರು ಎಂಬ ಪ್ರಶ್ನೆ ಎದ್ದು ತೊಡಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಚಿಂತಾಜನಕದ ಸ್ಥಿತಿಯಲ್ಲಿ ಸೊರಕೆಯವರಿಗೆ ವಕ್ತಾಕರನ್ನಾಗಿ ನೇಮಕ ಮಾಡಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಯಾವ ರೀತಿ ಮುನ್ನಡೆಯಲಿದೆ ಎಂಬುದನ್ನು ಕಾದು ನೋಡಬೇಕು. |