ಸರಕಾರಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ- ತಳ್ಳಾಟ-ಆರು ಮಕ್ಕಳಿಗೆ ಗಾಯ
ಮಲ್ಪೆ: ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೂ ಇದೀಗ ಓರ್ವ ಶಿಕ್ಷಕರನ್ನು ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದ್ದು ಇದಕ್ಕೆ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇಂದು ಬೆಳಿಗ್ಗೆ ಶಾಲೆ ಆರಂಭವಾಗುತ್ತಿದ್ದಂತೆ ಸ್ಥಳೀಯರು ಆಗಮಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಶಾಲೆಗೆ ಆಗಮಿಸಿದ ಬಿ.ಇ.ಒ ಪೋಷಕರೊಂದಿಗೆ ಸಭೆ ನಡೆಸುತ್ತಿದ್ದಾಗ ಮಕ್ಕಳು ಕೊಠಡಿ ಒಳಗೆ ಹೋಗುವುದನ್ನು ಪೊಲೀಸರು ತಡೆದಿದ್ದಾರೆ. ಆಗ ನಡೆದ ತಳ್ಳಾಟದಲ್ಲಿ ಆರು ಮಕ್ಕಳು ಗಾಯಗೊಂಡಿದ್ದಾರೆ ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.
ಇಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಒಟ್ಟು ಎಂಭತ್ತು ವಿದ್ಯಾರ್ಥಿಗಳು ಕಲಿಯುತ್ತಿದ್ದು ಈ ಮುಂಚೆ ಮೂವರು ಶಿಕ್ಷಕರಿದ್ದರು. ಇದೀಗ ಅವರಲ್ಲಿ ಓರ್ವ ಶಿಕ್ಷಕರನ್ನು ವರ್ಗಾವಣೆ ಮಾಡಲು ಸರ್ಕಾರ ಹೊರಟಿದೆ.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ಮುಖಂಡರು,ಸರಕಾರಿ ಶಾಲೆಯನ್ನು ನೇರವಾಗಿ ಮುಚ್ಚದೆ ಹಿಂಬದಿಯಿಂದ ಮುಚ್ಚಲು ಪ್ರಯತ್ನಿಸಲಾಗುತ್ತಿದೆ. ಸರಕಾರಿ ಶಾಲೆಗೆ ಶಿಕ್ಷಕರನ್ನು ಕೊಡುತ್ತಿಲ್ಲ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ. ಈ ಮುಂಚೆ ಕೌನ್ಸಿಲಿಂಗ್ ನಡೆಸುವಾಗ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ನಮ್ಮನ್ನು ಬಂಧಿಸುವ ಪ್ರಯತ್ನ ನಡೆದಿತ್ತು. ನ್ಯಾಯಯುತವಾದ ಬೇಡಿಕೆಯಿಟ್ಟಾಗ ನಮ್ಮನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಮತ್ತೆ ನಮ್ಮ ಶಿಕ್ಷಕರೊಬ್ಬರನ್ನು ವರ್ಗಾವಣೆ ಮಾಡಲು ಸರಕಾರ ಮುಂದಾಗಿದೆ.
ನಮಗೆ ನ್ಯಾಯ ದೊರಕಿಸಿಕೊಡಬೇಕು.ಈ ಶಾಲೆಗೆ ಏಳು ಶಿಕ್ಷಕರ ಅಗತ್ಯವಿದೆ. ಬಡ ಕೂಲಿ ಕಾರ್ಮಿಕರ ಮಕ್ಕಳು, ಮೀನುಗಾರರ ಮಕ್ಕಳು ಶಿಕ್ಷಣ ವಂಚಿತರಾಗುವುದರಿಂದ ತಡೆಯಬೇಕಿದೆ. ನಮ್ಮ ಬೇಡಿಕೆ ಈಡೇರುವತನಕ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.