ಉಡುಪಿ: ಜಿಲ್ಲಾಮಟ್ಟದ ಜಾನಪದ ಸ್ಪರ್ಧೆಗೆ ಚಾಲನೆ
ಉಡುಪಿ: ಪ್ರಾಚೀನ ಜಾನಪದ ಕಲೆಯನ್ನು ನಮ್ಮ ಹಿರಿಯರು ಬಲುಕಷ್ಟಪಟ್ಟು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇಂದಿನ ಯುವಜನಾಂಗ ಜಾನಪದ ಕಲೆಗಳ ಬಗ್ಗೆ ನಿರಾಸಕ್ತಿ ತೋರುತ್ತಿರುವುದು ವಿಷಾದನೀಯ. ಜೊತೆಗೆ ದೈವಪಾಡ್ದನ ಹೇಳುವ ಕಲಾವಿದರಲ್ಲೂ ಕೂಡಾ ಆಸಕ್ತಿ ಕಡಿಮೆಯಾಗಿದೆ ಎಂದು ಭೂತನರ್ತನ ಕಲಾವಿದ ರವಿ ಪಾಣಾರ ಪಡ್ಡಂ ತಿಳಿಸಿದ್ದಾರೆ.
ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ಉಡುಪಿ ತಲ್ಲೂರ್ ಫ್ಯಾಮಿಲಿ ಟ್ರಸ್ಟ್ ಮತ್ರು ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕದ ವತಿಯಿಂದ ನಡೆದ ಉಡುಪಿ ಜಿಲ್ಲಾಮಟ್ಟದ ಜಾನಪದ ಸ್ಪರ್ಧಾ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಜಿಲ್ಲೆಯ ಜನಪದ ಕಲಾವಿದರನ್ನು ಒಗ್ಗೂಡಿಸಿ, ಸೂಕ್ತ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಜಾನಪದ ಸ್ಪರ್ಧೆ ಗಳನ್ನು ಜಾನಪದ ಪರಿಷತ್ತು ಮೂಲಕ ಆಯೋಜಿಸಲಾಗಿದ್ದು,ಹೆಚ್ಚಿನ ಕಲಾವಿದರ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿ ನಡೆದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಜಿಲ್ಲಾ ಗವರ್ನರ್ ನೇರಿ ಕರ್ನೇಲಿಯೊ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಉಡುಪಿಯ ಉದ್ಯಮಿ ಗೋಪಾಲ ಸಿ.ಬಂಗೇರ, ಅನುಷಾ ಆಚಾರ್ಯ, ಹರೀಶ್ ಎಂ.ಯು, ಶೇಖರ್ ರಾಧಾಕೃಷ್ಣ ಮೆಂಡನ್ ಮಲ್ಪೆ, ಕಲ್ಮಾಡಿ, ಹೇಮಂತ್ ಬೈಲೂರು ಮತ್ತಿತರರು ಉಪಸ್ಥಿತರಿದ್ದರು. ಉಡುಪಿ ತಾಲೂಕು ಘಟಕದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಅಮಿತಾಂಜಲಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಪ್ರಶಾಂತ್ ಭಂಡಾರಿ ವಂದಿಸಿದರು. ಜಾನಪದ ಗೀತೆ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆ, ಗಾದೆ ಸ್ಪರ್ಧೆ, ಜಾನಪದ ವಾದ್ಯಸಂಗೀತ ಸ್ಪರ್ಧೆ ವೈಯಕ್ತಿಕ ಹಾಗೂ ಗುಂಪು ವಿಭಾಗದಲ್ಲಿ ನಡೆಯಿತು.
ತೀರ್ಪುಗಾರರಾಗಿ ಪ್ರಕಾಶ ಸುವರ್ಣ ಕಟಪಾಡಿ, ಲಕ್ಷ್ಮೀ ನಾರಾಯಣ ಉಪಾಧ್ಯ ಪಾಡಿಗಾರ್, ಪಾಂಡುರಂಗ ಪಡ್ಡಂ, ಅಮಿತಾಂಜಲಿ, ಶೇಖರ ಪೂಜಾರಿ ಕಲ್ಮಾಡಿ ಪಾಲ್ಗೊಂಡಿದ್ದರು.