ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಮನೆಗೆ ಮಾಂಕಾಳ ವೈದ್ಯ: ಕಾರ್ಯಕರ್ತರ ವ್ಯಾಪಕ ಆಕ್ರೋಶ
ಉಡುಪಿ, ಜೂ.18(ಉಡುಪಿ ಟೈಮ್ಸ್ ವರದಿ): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರ ಕಳೆದುಕೊಂಡು ಸೋತು ಸುಣ್ಣವಾಗಿರುವ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇದೀಗ ಆಕ್ರೋಶ ಭುಗಿಲೆದ್ದಿದೆ. ಇತ್ತೀಚಿಗೆ ಉಡುಪಿ ಜಿಲ್ಲಾ ಭೇಟಿಯಲ್ಲಿದ್ದ ಮೀನುಗಾರಿಕಾ ಮತ್ತು ಬಂದರು ಸಚಿವ ಮಾಂಕಾಳ ವೈದ್ಯ, ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಜಿಲ್ಲೆಯ ನಾಯಕರು ಸರಿಯಾದ ಪ್ರಚಾರ ಮಾಡಿದ್ದೆ ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗುತ್ತಿದ್ದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಗೆ ಇಲ್ಲಿಯ ನಾಯಕರೇ ಕಾರಣ ಎಂದಿದ್ದರು.
ನೇರ ಮಾತುಗಳಿಂದ ಕಾಂಗ್ರೆಸ್ ಕಾರ್ಯಕರ್ತರಿಂದ ಚಪ್ಪಳೆಯನ್ನು ಗಿಟ್ಟಿಸಿಕೊಂಡಿದ್ದರು. ಆದರೆ ಅದೇ ಕಾರ್ಯಕರ್ತರು ಈಗ ಮೀನುಗಾರಿಕಾ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಚಿವರು ನಮಗೆ ಬೇಡ, ಇವರು ಬಿಜೆಪಿ ಬೆಂಬಲಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರೇ ಇತ್ತ ಗಮನವಹಿಸಿ ಎಂದು ಸೋಶಿಯಲ್ ಮಾಧ್ಯಮಗಳಲ್ಲಿ ಸಚಿವರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಹೊರ ಬೀಳಲು ಕಾರಣ ಕಾಂಗ್ರೆಸ್ ಭವನದ ಭೇಟಿಯ ಬಳಿಕ ಮೀನುಗಾರಿಕಾ ಸಚಿವರು ತೆರಳಿದ್ದು ಬಿಜೆಪಿ ಮುಖಂಡ ಪ್ರಮೋದ್ ರಾಜ್ ನಿವಾಸಕ್ಕೆ. ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಪ್ರಮೋದ್ ಮಧ್ವರಾಜ್‌ರವರಿಗೆ ಅಂದಿನ ಸಿದ್ದರಾಮಯ್ಯ ಸರ್ಕಾರ ಮೀನುಗಾರಿಕಾ ಮತ್ತು ಬಂದರು ಸಚಿವರನ್ನಾಗಿ ಆಯ್ಕೆ ಮಾಡಿತ್ತು. ಬಳಿಕ ಕಾಂಗ್ರೆಸ್ ವಿರುದ್ಧ ಮುನಿದು ಬಿಜೆಪಿ ಸೇರ್ಪಡೆಗೊಂಡಿದ್ದ ಪ್ರಮೋದ್ ಮಧ್ವರಾಜ್ ಸಂದರ್ಭದಲ್ಲಿ ತಕ್ಕಂತೆ ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರು.
ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯ ಬಳಿಕ ಅವರ ವಿರುದ್ಧ ಮುನಿಸಿಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಈಗ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗೆ ಉಡುಪಿ ಜಿಲ್ಲಾ ಬೇಟಿಯಲ್ಲಿದ್ದ ಮೀನುಗಾರಿಕಾ ಮತ್ತು ಬಂದರು ಸಚಿವರು, ತನ್ನ ಪ್ರವಾಸದ ವೇಳೆ ಮಾಜಿ ಮೀನುಗಾರಿಕಾ ಮತ್ತು ಬಂದರು ಸಚಿವರು, ಪ್ರಸ್ತುತ ಬಿಜೆಪಿ ಮುಖಂಡರಾಗಿರುವ ಪ್ರಮೋದ್ ಮಧ್ವರಾಜ್ ನಿವಾಸಕ್ಕೆ ಭೇಟಿ ನೀಡಿದ್ದು, ಮಾತುಕತೆಯನ್ನು ನಡೆಸಿದ್ದರು. ಬಳಿಕ ಇಬ್ಬರು ತಮ್ಮ ಭೇಟಿಯ ಫೋಟೋಗಳನ್ನು ಸೋಶಿಯಲ್ ಮಾಧ್ಯಮದಲ್ಲಿ ಪಕ್ಷಾತೀತವಾಗಿ ಪ್ರಕಟಿಸಿದ್ದರು. ಇದೇ ಫೋಟೋಗಳು ಈಗ ಕಾಂಗ್ರೆಸ್‌ನಲ್ಲಿ ಬೆಂಕಿ ಹಬ್ಬಿಸಿದೆ.
ಚುನಾವಣೆಯ ಮೊದಲು ಉಡುಪಿಯಲ್ಲಿ ನಡೆದ ಪ್ರಜಾ ಧ್ವನಿ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಸ್ತುತ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಮೋದ್ ಮಧ್ವರಾಜ್ ವರ ವಿರುದ್ಧ ಹರಿ ಹಾಯ್ದಿದ್ದರು. ಮಾತ್ರವಲ್ಲದೆ ಮಧ್ವರಾಜ್ ಉಡುಪಿಯಲ್ಲಿ ಎಲ್ಲಿ ಚುನಾವಣೆಗು ಸ್ಪರ್ಧಿಸಿದರೂ ಅವರನ್ನು ಸೋಲಿಸಿ ಎಂದು ಕಾರ್ಯಕರ್ತರಿಗೆ ನೀಡಿದ್ದರು. ಆದರೆ ಈಗ ಇದೆಲ್ಲವನ್ನು ಧಿಕ್ಕರಿಸಿ ಸಚಿವರು ಮಾಜಿ ಸಚಿವರ ಮನೆಗೆ ಭೇಟಿ ನೀಡಿದ್ದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚಿಗೆ ನಿಧನರಾಗಿದ್ದ ಮಾಜಿ ಶಾಸಕ ಯು.ಆರ್. ಸಭಾಪತಿ ನಿವಾಸಕ್ಕೆ ಸೌಜನ್ಯಕ್ಕಾದರೂ ಸಚಿವರು ಭೇಟಿ ನೀಡಬಹುದಿತ್ತು. ಜಿಲ್ಲಾ ಕಾಂಗ್ರೆಸ್ ಇದರ ಬಗ್ಗೆ ಗಮನಹರಿಸುತ್ತಿಲ್ಲವೇ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಪ್ರಶ್ನೆ.
ಈ ಬಗ್ಗೆ “ಉಡುಪಿ ಟೈಮ್ಸ್” ಜೊತೆ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಸಚಿವ ಮಾಂಕಾಳ್ ವೈದ್ಯ ಅವರ ಪ್ರವಾಸ ಪಟ್ಟಿಯಲ್ಲಿ ಮಾಜಿ ಸಚಿವ, ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರ ಮನೆಯ ಭೇಟಿ ಕಾರ್ಯಕ್ರಮದ ಯಾವುದೇ ಮಾಹಿತಿ ಇರಲಿಲ್ಲ. ಅವರ ಭೇಟಿಯಾದ ಬಗ್ಗೆ ಕಾರ್ಯಕರ್ತರು ನನ್ನ ಬಳಿ ವಿಚಾರಿಸುತ್ತಿದ್ದಾರೆ. ಈ ಬಗ್ಗೆ ಸಚಿವ ಮಾಂಕಾಳ್ ವೈದ್ಯ ಅವರ ಸ್ಪಷ್ಟನೆ ಕೇಳಲು ಪ್ರಯತ್ನ ಪಡುತ್ತಿದ್ದು, ಅವರು ದೂರವಾಣಿಗೆ ಸಿಗುತ್ತಿಲ್ಲ ಎಂದರು.