ಹೆದ್ದಾರಿ ಕುಸಿದು ಅಪಾಯ ಸಂಭವಿಸಿದರೆ ನೈತಿಕ ಹೊಣೆ ಹೊರಲು ಸಚಿವೆ ಶೋಭಾ ಸಿದ್ದರಿದ್ದಾರೆಯೇ?- ಕಾಂಚನ್
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಲ್ಯಾಣಪುರದ ಸಂತೆಕಟ್ಟೆಯಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕಾಗಿ ತೋಡಿರುವ ಹೊಂಡದಿಂದ ಮಳೆಗಾಲದಲ್ಲಿ ಹೆದ್ದಾರಿ ಕುಸಿದು ಏನಾದರೂ ಅಪಾಯ ಸಂಭವಿಸಿದ್ದಲ್ಲಿ ಅದರ ನೈತಿಕ ಹೊಣೆಯನ್ನು ಹೊರಲು ಕೇಂದ್ರ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದರಾದ ಕುಮಾರಿ ಶೋಭಾ ಕರಂದ್ಲಾಜೆಯವರು ಸಿದ್ದರಿದ್ದಾರೆಯೇ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪ್ರಶ್ನಿಸಿದ್ದಾರೆ.
ಅವೈಜ್ಞಾನಿಕವಾಗಿ ಯಾವುದೇ ರೀತಿಯಮುಂಜಾಗ್ರತಾ ಕ್ರಮ ಕೈಗೊಳ್ಳದೆ ಆಳವಾದ ಗುಂಡಿಯನ್ನು ತೋಡಿದ್ದು ಸೂಕ್ತವಾದ ಮುನ್ನೆಚ್ಚರಿಕಾ ಕ್ರಮವನ್ನು ಕೂಡ ಕೈಗೊಂಡಿಲ್ಲ. ಒಂದು ವೇಳೆ ಗುಂಡಿಯ ಪಕ್ಕದಲ್ಲೇ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಮಳೆಗೆ ಕುಸಿದು ಹೋದಲ್ಲಿ ಜೀವ ಹಾನಿಯ ಜೊತೆಗೆ ಸಂಪರ್ಕ ಕೂಡ ಕಡಿದುಕೊಳ್ಳುವ ಭೀತಿ ಇದೆ. ರಸ್ತೆ ನಿರ್ಮಾಣದ ಸಮಯದಲ್ಲೇ ಸೂಕ್ತ ಅಂಡರ್ ಪಾಸ್ ನಿರ್ಮಿಸದೆ ಈಗ ಇದನ್ನು ನಿರ್ಮಿಸಲಿಕ್ಕಾಗಿ ಆಳವಾದ ಗುಂಡಿ ಮಾಡಿರುವುದು ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯತಕ್ಕೆ ತೋರಿದ ಕೈಗನ್ನಡಿಯಾಗಿದೆ.
ಈ ನಡುವೆ ಸಂಸದರು ಇತ್ತೀಚಿನ ಸಭೆಯಲ್ಲಿ ಗುಂಡಿಯನ್ನು ತಾತ್ಕಾಲಿಕವಾಗಿ ಮಣ್ಣು ಹಾಕಿ ಮುಚ್ಚಲು ಸೂಚಿಸಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ.
ಈಗಾಗಲೇ ಅಲ್ಲಿನ ಲೋಡುಗಟ್ಟಲೇ ಮಣ್ಣತನ್ನು ಲಕ್ಷಾಂತರ ರೂಪಾಯಿಗಳಿಗೆ ಇವರದೇ ಪಕ್ಷದ ನಾಯಕರು ಮಾರಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಜನಸಾಮಾನ್ಯರು ನೋಡಿದ್ದಾರೆ.ಅಲ್ಲದೆ ಈಗಾಗಲೇ ಅಷ್ಟೋಂದು ಆಳವಾಗಿ ತೋಡಿರುವ ಗುಂಡಿಯನ್ನು ಮುಚ್ಚಲು ಸಾಧ್ಯವೇ ಎನ್ನುವ ಕನಿಷ್ಠ ಜ್ಞಾನ ಸಂಸದರಿಗೆ ಇಲ್ಲವೇ ?
ಪರ್ಕಳದ ಜನರು ಕಳೆದ 4 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ರೀತಿಯ ಕಾಮಗಾರಿಯಿಂದ ಪರದಾಡುತ್ತಿದ್ದಾರೆ. ಭೂಮಿ ಕಳೆದುಕೊಂಡ ಸ್ಥಳೀಯರಿಗೆ ಸರಿಯಾದ ಪರಿಹಾರ ಕೂಡ ದೊರಕಲಿಲ್ಲ. ಕಾಮಗಾರಿ ವಿಳಂಬವಾದ ಕಾರಣ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಸಾಕಷ್ಟು ಅಪಘಾತಗಳು ಸಂಭವಿಸಿ ಜೀವಕ್ಕೆ ಹಾನಿಯಾಗಿದೆ. ಇದೇ ರೀತಿ ಇಂದ್ರಾಳಿಯ ಬ್ರಿಡ್ಜ್‌ನ ಕಾಮಗಾರಿ ಸಂಪೂರ್ಣವಾಗದೇ ಸಾರ್ವಜನಿಕರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳು ತಮ್ಮ ಕ್ಷೇತ್ರದಲ್ಲಿ ಇದ್ದರೂ ಇಲ್ಲಿನ ಸಂಸದರಾದ ಶೋಭಾ ಕರಂದ್ಲಾಜೆ ಅವರು ನಮ್ಮ ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಮೊದಲು ಸರಿಪಡಿಸಲಿ.
ಮೋದಿಯ ಮುಖ ನೋಡಿ ಶೋಭಾ ಕರಂದ್ಲಾಜೆ ಅವರಿಗೆ ಮತ ಚಲಾಯಿಸಿದ ಕ್ಷೇತ್ರದ ಜನರು ಈಗ ಪಶ್ಚಾತಾಪ ಪಡುತ್ತಿದ್ದಾರೆ. ಮೂರು ನಾಲ್ಕು ತಿಂಗಳಿಗೊಮ್ಮೆ ಅತಿಥಿ ಕಲಾವಿದರಾಗಿ ಜಿಲ್ಲೆಗೆ ಆಗಮಿಸುವ ಸಂಸದರಾದ ಶೋಭಾ ಕರಂದ್ಲಾಜೆ ಜಿಲ್ಲೆಯ ಸಮಸ್ಯೆಯ ಬಗ್ಗೆ ಅರಿತುಕೊಳ್ಳುವ ಪ್ರಯತ್ನ ಕೂಡ ಮಾಡದಿರುವುದು ಜಿಲ್ಲೆಯ ಜನರ ದುರಂತವಾಗಿದೆ.
ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ವಿಫಲವಾದ ಹೆದ್ದಾರಿ ಇಲಾಖೆ ತಮ್ಮದೇ ಕೇಂದ್ರ ಸರಕಾರದ ಅಧೀನದಲ್ಲಿದ್ದು ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಕೂಡ ಸಂಸದರಿಗೆ ಸಾಧ್ಯವಾಗದಿರುವುದು ಇವರ ದುರ್ಬಲತೆಯನ್ನು ತೋರಿಸುತ್ತದೆ. ಈ ಬಾರಿಯ ಮಳೆಗಾಲದಲ್ಲಿ ಸಂತೆಕಟ್ಟೆ ಪರಿಸರದ ಜನರು ಸೇರಿದಂತೆ ಜಿಲ್ಲೆಯ ಜನರು ಅಂಡರ್ ಪಾಸ್ ಗುಂಡಿಯಿಂದ ಸಮಸ್ಯೆಗೆ ಒಳಗಾಗುವುದು ಖಂಡಿತವಾಗಿದ್ದು ಈ ಬಗ್ಗೆ ಸಂಸದೆಯವರು ಸೂಕ್ತ ಕ್ರಮಕೈಗೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಸಾರ್ವಜನಿಕರೊಂದಿಗೆ ಸೇರಿ ಹೋರಾಟ ಮಾಡಬೇಕಾದೀತು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.