ಸಚಿವ ಮಾಂಕಾಳ್ ವೈದ್ಯ ಬಿಜೆಪಿ ನಾಯಕನ ಮನೆಗೆ ಭೇಟಿ: ನಮ್ಮ ಅಭ್ಯರ್ಥಿಗಳನ್ನು ಸೋಲಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಲೇ?- ಸದಾಶಿವ

ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್ ಸೋಲುತ್ತದೆ, ಸಿದ್ದರಾಮಯ್ಯರವರು ಗಾಂಧಿ ಕುಟುಂಬದ ಕೈಗೊಂಬೆ, ಡಿ.ಕೆ ಶಿವಕುಮಾರ್ ಭ್ರಷ್ಟ ರಾಜಕಾರಣಿ ಮುಂತಾದ ಹತ್ತು ಹಲವು ಹೇಳಿಕೆಗಳನ್ನು ನೀಡಿ, ನೂರಕ್ಕೆ ನೂರು ಶೇಕಡಾ ಕಾಂಗ್ರೆಸ್ ಪಕ್ಷದ ಸೋಲಿಗೆ ಶ್ರಮಿಸಿದ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ರವರ ಮನೆಗೆ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ, ಅವರ ಮನೆಯಲ್ಲಿ ಸನ್ಮಾನ ಸ್ವೀಕಾರ ಮಾಡಿದ್ದು ಉಡುಪಿ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ ಉಡುಪಿಯ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಡಿದ ಅವಮಾನ ಮತ್ತು ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ನೀಡಿದ ಆಗೌರವ.

ವೈಯಕ್ತಿಕ ಸಂಬಂಧ ಏನೇ ಇದ್ದರೂ ಕೂಡ ಸಚಿವರು ಜಿಲ್ಲೆಗೆ ನೀಡಿದ ಮೊದಲ ಭೇಟಿಯಲ್ಲೆ ಅವರ ಮನೆಗೆ ಹೋಗಿ ಸನ್ಮಾನ ಸ್ವೀಕರಿಸುವ ತನಕ ಹೋಗಬಾರದು, ಇದೆಲ್ಲ ವಿಚಾರ ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರ ಗಮನಕ್ಕೆ ಬಂದಿದೆಯೋ ಇಲ್ಲವೋ ಅಥವಾ ಇದರಲ್ಲಿ ಏನಾದರೂ ಒಳ ಒಪ್ಪಂದ ಇದೆಯೇ ಅಥವಾ ಮುಂದಿನ ದಿನಗಳಲ್ಲಿ ಪ್ರಮೋದ್ ಮಧ್ವರಾಜ್ ರವರು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಬರುವ ಪ್ರಕ್ರಿಯೆಯ ಒಂದು ಭಾಗವೇ ಎಂಬುದನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವರಿಷ್ಠರು ಕಾರ್ಯಕರ್ತರಿಗೆ ತಿಳಿಸಬೇಕು.

ಸ್ಥಳೀಯ ನಾಯಕರಾದವರು ತಮ್ಮ ವಾರ್ಡ್‌ನಲ್ಲಿ ಚುನಾವಣೆಯಲ್ಲಿ ಮುನ್ನಡೆ ಸಾಧಿಸಲು ಸಾಧ್ಯ ಆಗದವರು ನಾಯಕರೇ ಅಲ್ಲ, ಅಂತವರು ಪಕ್ಷದ ನಾಯಕರಾಗಲು ಯೋಗ್ಯರಲ್ಲ ಎಂಬಿತ್ಯಾದಿ ಮಾತುಗಳ ಮೂಲಕ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾಷಣ ಬಿಗಿದು ಈ ಸಚಿವರು ನೇರವಾಗಿ ಹೋದದ್ದು ಬಿಜೆಪಿ ನಾಯಕರ ಮನೆಗೆ ಆತಿತ್ಯ ಸ್ವೀಕರಿಸಲು.

ನಮ್ಮ ಕಡೆ ಬಂದ ನಾಯಕರೆಲ್ಲ ಹೀಗೆ ಒಬ್ಬೊಬ್ಬರಾಗಿ ಬಿಜೆಪಿಯವರ ಬೆನ್ನಿಗೆ ನಿಂತು ಅವರ ಕೆಲಸ ಮಾಡಿ ಕೊಡುವುದಾದರೆ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಏನಿದೆ…? ಎಲ್ಲವೂ ಬಿಜೆಪಿ ನಾಯಕರು ಹೇಳಿದಂತೆ ಆಗುವ ಸಾಧ್ಯತೆ ಇದೆ.

ರಾಜ್ಯದಿಂದ ಬರುವ ಕಾಂಗ್ರೆಸ್ ನಾಯಕರು ಯಾರೇ ಇರಬಹುದು ಅವರ ಬಿಜೆಪಿ ಪಕ್ಷದ ನಾಯಕರ ಒಡನಾಟ ಬಿಟ್ಟರೆ ಮಾತ್ರ ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲದೇ ಹೋದರೆ ಮಾತೊಮ್ಮೆ ಶೂನ್ಯ ಸಂಪಾದನೆ ಖಂಡಿತ ಎಂದು ಕಾಂಗ್ರೆಸ್ ಮುಖಂಡ ಸದಾಶಿವ ಅಮೀನ್ ಕಟ್ಟೆಗುಡ್ಡೆ ಅಸಮಾಧಾನ ವ್ಯಕ್ತಡಿಸಿದ್ದಾರೆ .

Leave a Reply

Your email address will not be published. Required fields are marked *

error: Content is protected !!