108 ಆಂಬುಲೆನ್ಸ್ ಸಿಬ್ಬಂದಿ ನಿರ್ಲಕ್ಷ್ಯ: ಒಂದೂವರೆ ಗಂಟೆ ಕಾದ ರೋಗಿ
ಬ್ರಹ್ಮಾವರ: 108 ಆಂಬುಲೆನ್ಸ್ ಸಿಬ್ಬಂದಿಯ ನಿರ್ಲಕ್ಷದಿಂದ ಜಿಲ್ಲಾಸ್ಪತ್ರೆಗೆ ಸಾಗಿಸಬೇಕಾದ ರೋಗಿಯನ್ನು ಸುಮಾರು ಒಂದೂವರೆ ಗಂಟೆ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಯ ಬಾಗಿಲಲ್ಲೇ ಕಾಯಿಸಿದ ಘಟನೆ ಸೋಮವಾರ ನಡೆದಿದೆ.
ಹರೀಶ್ ಕಾರ್ಕಳ (42) ಎಂಬವರು ಮೇದೋಜಿರಕ ಗ್ರಂಥಿಯ ಊತದಿಂದ ಬಳಲುತ್ತಿದ್ದು, ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿ , ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವುದರಿಂದ ಜಿಲ್ಲಾಸ್ಪತೆಗೆ ಕಳುಹಿಸಲು ನಿರ್ಧರಿಸಿ 108 ಅಂಬುಲೆನ್ಸ್‌ಗೆ ಕರೆ ಮಾಡಿದ್ದರು.
ಅವರು ರೋಗಿಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದರೆ ಗಾಲಿಕುರ್ಚಿಯ ಮೇಲೆ ಕುಳಿತಿದ್ದ ರೋಗಿಯನ್ನು ನೋಡಿ, ‘ ಅವರ ಜತೆಯಲ್ಲಿ ಆತನ ಮನೆಯವರನ್ನು ಕಳುಹಿಸಿ, ಇಲ್ಲವಾದಲ್ಲಿ ನಾವು ಜಿಲ್ಲಾಸ್ಪತೆಗೆ ಕರೆದುಕೊಂಡು ಹೋಗಲ್ಲ’ ಎಂದಿದ್ದರು. ಆಸ್ಪತ್ರೆಯ ವೈದ್ಯರ ಮಾತಿಗೂ ಬೆಲೆಗೊಡಲಿಲ್ಲ. ಕೊನೆಗೆ ವೈದ್ಯರು, ‘ನಿಮ್ಮಿಂದ ಆಗದಿದ್ದಲ್ಲಿ ನಾನೇ ಆಂಬುಲೆನ್ಸ್ ಚಲಾಯಿಸಿಕೊಂಡು ಹೋಗುತ್ತೇನೆ, ಆತನಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ, ಆತನಿಗೆ ಹೆಚ್ಚು ಕಡಿಮೆಯಾದಲ್ಲಿ ಯಾರು ಹೊಣೆ’ ಎಂದು ಗದರಿದ ನಂತರ ಆಂಬುಲೆನ್ಸ್ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದರು.
ವೈದ್ಯರು ಆಂಬುಲೆನ್ಸ್ ಸಿಬ್ಬಂದಿಗೆ , ‘ನಿನ್ನ ಗುರುತು ಪತ್ರ ತೋರಿಸು’ ಎಂದು ಗದರಿಸಿದಾಗ ಗುರುತುಪತ್ರ ನೀಡದೆ ರೋಗಿಯನ್ನು ಆಂಬುಲೆನ್ಸ್ನಲ್ಲಿ ಕುಳ್ಳಿರಿಸಿ, ತಕ್ಷಣ ತೆರಳಿದರು.