ಉಡುಪಿ ಮಿಷನ್ ಆಸ್ಪತ್ರೆ: ಶತಮಾನೋತ್ಸವ ಸಮಾರೋಪ- ಸಿಟಿ ಸ್ಕ್ಯಾನ್ ಉದ್ಘಾಟನೆ
ಉಡುಪಿ, ಜೂ.16: ದಶಕಗಳ ಹಿಂದೆ ಯಾವುದೇ ಸೌಲಭ್ಯ ಇಲ್ಲದ ಕಾಲದಲ್ಲಿ ಅನಾರೋಗ್ಯ ಪೀಡಿತ ಜನರಿಗೆ, ನಿರ್ಗತಿಕರಿಗೆ ಹೊಸ ಚಿಂತನೆಯೊಂದಿಗೆ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯನ್ನು ಸ್ಥಾಪಿಸಲಾಗಿತ್ತು. ಇದೀಗ ನೂರು ವರ್ಷ ಪೂರೈಸಿ ಉತ್ತಮ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ನಮ್ಮ ಹೆಮ್ಮೆ ಎಂದು ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತದ ಬಿಷಪ್ ಅ.ನಂ.ಹೇಮಚಂದ್ರ ಕುಮಾರ್ ಹೇಳಿದ್ದಾರೆ.
ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಶತಮಾನೋತ್ಸವ ವರ್ಷಾಚರಣೆಯ ಸಂಭ್ರಮದ ಸಮಾರೋಪ ಸಮಾರಂಭ ಮತ್ತು 1.65 ಕೋಟಿ ರೂ, ವೆಚ್ಚದ ನೂತನ ಜಿಇ 32 ಸ್ಟೈಸ್ ಆಸ್ಟರ್ ಸಿಟಿ ಸ್ಕ್ಯಾನ್ ಯಂತ್ರದ ಸಿಟಿ ಸ್ಕ್ಯಾನ್ ಘಟಕವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮುದಾಯವನ್ನು ಅರಿತುಕೊಂಡು, ಜನಸಾಮಾನ್ಯರ ನಾಡಿಮಿಡಿತ ಬಲ್ಲವರಾಗಿ, ಬೇಕಾದಾಗ ದೇವರಲ್ಲಿ ಮೊರೆ ಇಟ್ಟು ಸೇವೆ ಸಲ್ಲಿಸಿದ ಆರೋಗ್ಯ ಸಂಸ್ಥೆ ಇದಾಗಿದೆ. ಆದ್ದರಿಂದಲೇ ಈ ನೂರು ವರ್ಷ ಪೂರೈಸಲು ಸಾಧ್ಯವಾಗಿದೆ. ಆಸಕ್ತಿ, ಅರಿವು, ಮೊರೆ ಇಟ್ಟ ಜೀವನದಿಂದ ಯಾವುದೇ ಸಂಸ್ಥೆ ಉತ್ತಮ ಭವಿಷ್ಯ ಕಾಣಲು ಸಾಧ್ಯ. ಅಂತಹ ಸಂಸ್ಥೆಗೆ ದೇವರು ಕೂಡ ರಕ್ಷಣೆ ಕೊಡುತ್ತಾರೆ ಎಂದರು.
ಈ ಸಂಸ್ಥೆಯನ್ನು ಕೇವಲ ಆಸ್ಪತ್ರೆಯನ್ನಾಗಿ ನೋಡದೆ ಸಮುದಾಯಕ್ಕೆ ಬೇಕಾದ ಸವಲತ್ತುಗಳನ್ನು ನೀಡಲಾಗುತ್ತಿದೆ. ಕೇವಲ ಆಸ್ಪತ್ರೆ ಎಂಬ ನೆಲೆಯಲ್ಲಿ ನೋಡಿದರೆ ಈ ಸಂಸ್ಥೆ ಇಷ್ಟು ಬೆಳೆಯಲು ಸಾಧ್ಯ ಇರುತ್ತಿರಲಿಲ್ಲ. ಇದರೊಂದಿಗೆ ಸಮುದಾಯಕ್ಕೆ ಬೇಕಾದ ಕೊಡುಗೆ ಕೂಡ ನೀಡಬೇಕು. ಇಂದಿನ ಸಂದರ್ಭ ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ, ಸವಲತ್ತುಗಳು ಬೇಕಾಗಿದೆ ಅದನ್ನು ಇಂದು ಈ ಆಸ್ಪತ್ರೆ ಸಾಧಿಸಿ ತೋರಿಸಿದೆ ಮುಂದಿನ 100 ವರ್ಷಕ್ಕೆ ಈ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಸವಾಲು ನಮ್ಮ ಮುಂದೆ ಇದೆ ಈ ಜವಾಬ್ದಾರಿ ಸಮುದಾಯದ ಮೇಲಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, ಆಸ್ಪತ್ರೆಯ ಎಲ್ಲ ಸಿಬ್ಬಂದಿಯ ಶ್ರಮ ಹಾಗೂ ದೇವರ ಅನುಗ್ರಹದಿಂದ ನಮ್ಮ ಆಸ್ಪತ್ರೆ ನೂರು ವರ್ಷ ಪೂರೈಸಿ ಮುಂದುವರಿಯುತ್ತಿದೆ. ಯಾವುದೇ ಒಂದು ಸಂಸ್ಥೆ ಯಶಸ್ವಿಯಾಗಬೇಕಾದರೆ ಸ್ಪಷ್ಟ ಗುರಿ ಇರಬೇಕು, ಉತ್ತಮ ಯೋಜನೆ ರೂಪಿಸಬೇಕು ಮತ್ತು ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಇದರಿಂದಲೇ ನಮ್ಮ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಬೆಂಗಳೂರಿನ ಎನ್. ಎಚ್.ಷಾ ಮಜುಂದಾರ್ ವೈದ್ಯಕೀಯ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪೌಲ್ ಸಿ.ಸಾಲಿನ್ಸ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನರನ್ನು ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ, ಕರ್ನಾಟಕ ದಕ್ಷಿಣ ಧರ್ಮಪ್ರಾಂತದ ಖಜಾಂಚಿ ವಿನ್ಸೆಂಟ್ ಪಾಲಣ್ಣ ಯುಬಿಎಂಸಿ ಅಧ್ಯಕ್ಷ ವಿಶಾಲ ಶಿರಿ, ವೈಎಂಸಿಎ ರಾಷ್ಟ್ರೀಯ ಮಂಡಳಿ ಉಪಾಧ್ಯಕ್ಷ ನೋಯೆಲ್ ಅಮಣ್ಣ ಕರ್ನಾಟಕ ದಕ್ಷಿಣ ಧರ್ಮಪ್ರಾಂತದ ಏರಿಯಾ ಚೇರ್ ಮ್ಯಾನ್ ರೆ.ಐವನ್ ಡಿ ಸೋನ್ಸ್ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಉಪಸ್ಥಿತರಿದ್ದರು.
ರೆ.ಕುಮಾರ್ ಸಾಲಿನ್ಸ್ ಪ್ರಾರ್ಥನೆ ನೆರವೇರಿಸಿದರು. ಆಸ್ಪತ್ರೆಯ ಲ್ಯಾಬ್ ವಿಭಾಗದ ಮುಖ್ಯಸ್ಥ ಡಾ. ನಾರಾಯಣ ಪಿ. ಸ್ವಾಗತಿಸಿದರು. ಹೇಮಲತಾ ಹಾಗೂ ಆಸ್ಪತ್ರೆಯ ಪಿಆರ್ ಓ. ರೋಹಿ ರತ್ನಾಕರ್ ಕಾರ್ಯಕ್ರಮ ನಿರೂಪಿಸಿದರು. ಡಾ.ದೀಪಾ ವೈ, ರಾವ್ ವಂದಿಸಿದರು.
ಇದಕ್ಕೂ ಮುನ್ನ ಕ್ರಿಶ್ಚಿಯನ್ ಹೈಸೂಲ್ ನಿಂದ ಆಸ್ಪತ್ರೆಯವರೆಗೆ ಮೆರವಣಿಗೆ ನಡೆಯಿತು.