ಈ ಬಾರಿಯ ಸಿಇಟಿಯ ಎಲ್ಲ ವಿಭಾಗಗಳಲ್ಲೂ ಬಾಲಕಿಯರದ್ದೇ ಮೇಲುಗೈ
ಬೆಂಗಳೂರು, ಜೂ.15: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ-2023ರ(ಸಿಇಟಿ) ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಈ ಬಾರಿ ಸಿಇಟಿಯಲ್ಲೂ ಎಲ್ಲ ವಿಭಾಗಗಳಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದರು.
‘ರಾಜ್ಯದಲ್ಲಿನ ಒಟ್ಟು 592 ಕೇಂದ್ರಗಳಲ್ಲಿ 261610 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಆ ಪೈಕಿ 244345 ಅಭ್ಯರ್ಥಿಗಳು ಪರೀಕ್ಷೆಗೆ ಬರೆದಿದ್ದಾರೆ’ ಎಂದು ಸಚಿವರು ಮಾಹಿತಿ ನೀಡಿದರು.
ಬೆಳಗ್ಗೆ 11 ಗಂಟೆ ನಂತರ http://kea.kar.nic.in ವೆಬ್‌ಸೈಟ್‌ನಲ್ಲಿ ಸಿಇಟಿ ಫಲಿತಾಂಶ ಲಭ್ಯವಾಗಲಿದೆ.
ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಇಂಜಿನಿಯರಿಂಗ್, ಆಯುರ್ವೇದ, ಹೋಮಿಯೋಪತಿ ಮತ್ತು ಫಾರ್ಮಸಿ, ಬಿಎಸ್‌ಸಿ ನರ್ಸಿಂಗ್ ಸೇರಿ ವಿವಿಧ ವೃತ್ತಿಪರ ಕೋಸ್‌ರ್ಗಳ ಪ್ರವೇಶಕ್ಕೆ ಸಿಇಟಿಯನ್ನು ನಡೆಸಲಾಗುತ್ತದೆ.
ಈ ವರ್ಷ ಒಟ್ಟು 2.6 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯನ್ನು ಬರೆದಿದ್ದರು. ರಾಜ್ಯಾದ್ಯಂತ 592 ಪರೀಕ್ಷಾ ಕೇಂದ್ರಗಳಲ್ಲಿ ಮೇ 20 ರಿಂದ ಮೇ 22ರವರೆಗೆ ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 16,000 ಕನ್ನಡೇತರ ವಿದ್ಯಾರ್ಥಿಗಳು ಈ ಪರೀಕ್ಷೆ ತೆಗೆದುಕೊಂಡಿದ್ದಾರೆ. ಮೇ 26 ರಂದು ಕೆಇಎ ತಾತ್ಕಾಲಿಕ ಉತ್ತರ ಕೀ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಏನೇ ಆಕ್ಷೇಪಣೆಗಳು ಇದ್ದರೆ ಜೂನ್ 30 ಒಳಗೆ ತಿಳಿಸಲು ಕಾಲಾವಕಾಶ ನೀಡಲಾಗಿದೆ.