ಬಹುಕೋಟಿ ಬಿಟ್ ಕಾಯಿನ್ ಹಗರಣ ಮರು ತನಿಖೆ- ಗೃಹ ಸಚಿವ ಜಿ.ಪರಮೇಶ್ವರ
ಬೆಂಗಳೂರು: ಹಿಂದಿನ ಬಿಜೆಪಿ ಆಡಳಿತದಲ್ಲಿ 2021ರಲ್ಲಿ ಬೆಳಕಿಗೆ ಬಂದ ಬಹುಕೋಟಿ ಬಿಟ್ ಕಾಯಿನ್ ಹಗರಣದ ಪ್ರಕರಣವನ್ನು ಮರುಪರಿಶೀಲಿಸುತ್ತಿದ್ದೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಬುಧವಾರ ತಿಳಿಸಿದ್ದಾರೆ.
ಹಗರಣದಲ್ಲಿ ‘ದೊಡ್ಡ ಹೆಸರುಗಳನ್ನು ಒಳಗೊಂಡಿರುವ ಕಾರಣ’ ಅದನ್ನು ಮುಚ್ಚಿಹಾಕಲು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಪ್ರಯತ್ನಿಸುತ್ತಿದೆ ಎಂದು ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಆರೋಪಿಸಿತ್ತು.
ಈಗ ಕಾಂಗ್ರೆಸ್ ಸರ್ಕಾರವಿದೆ. ನಾವು ಈ ವಿಷಯಗಳನ್ನು ಈಗ ಮುನ್ನೆಲೆಗೆ ತರುತ್ತಿದ್ದೇವೆ. ನಾವು ಬಿಟ್ ಕಾಯಿನ್ ಪ್ರಕರಣವನ್ನು ಮರು ಪರಿಶೀಲಿಸುತ್ತಿದ್ದೇವೆ. ಬಿಜೆಪಿಯವರು ಈಗಲೇ ಕುಣಿದಾಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ತಿಂಗಳೂ ಕಳೆದಿಲ್ಲ. ಅವರು ಸ್ವಲ್ಪ ಸಮಾಧಾನವಾಗಿರುವುದು ಒಳ್ಳೆಯದು’ ಎಂದು ಪ್ರಶ್ನೆಯೊಂದಕ್ಕೆ ಪರಮೇಶ್ವರ ಅವರು ಸುದ್ದಿಗಾರರಿಗೆ ತಿಳಿಸಿದರು.
ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಶ್ರೀಕಷ್ಣ ಅಲಿಯಾಸ್ ಶ್ರೀಕಿ, ಬಿಟ್ ಕಾಯಿನ್ ಜಾಲದ ಸಂಪೂರ್ಣ ಮಾಹಿತಿಯನ್ನು ತೆರೆದಿಟ್ಟಿದ್ದ. ಈತ ಅಂತರರಾಷ್ಟ್ರೀಯ ಮಟ್ಟದ ಹ್ಯಾಕರ್ ಎಂಬ ಸಂಗತಿಯೂ ತಿಳಿದುಬಂದಿತ್ತು. ಈ ನಡುವೆಯೇ ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದ ಶ್ರೀಕಿ, ಕೋಟಿಗಟ್ಟಲೆ ಹಣ ದೋಚಿದ್ದ ಸಂಗತಿಯೂ ಹೊರಬಿದ್ದಿತ್ತು.
ಹ್ಯಾಕ್ ಮಾಡಿ ದೋಚಿದ್ದ ಹಣವನ್ನು ಬಿಟ್ ಕಾಯಿನ್ ರೂಪದಲ್ಲಿ ಹೂಡಿಕೆ ಮಾಡಿದ್ದು ತನಿಖಾಧಿಕಾರಿಗಳಿಗೆ ತಿಳಿದುಬಂದಿತ್ತು. ಶ್ರೀಕಿ ವಿರುದ್ಧ ಕ್ರಿಪ್ಟೋಕರೆನ್ಸಿ ಕಳ್ಳತನ, ಡ್ರಗ್ ಪೆಡ್ಲಿಂಗ್ ಮತ್ತು ಸೈಬರ್ ವಂಚನೆಯ ಆರೋಪಗಳೂ ಆತನ ಮೇಲಿದ್ದವು.
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ ಮತ್ತು ಈ ವಿಷಯವು ನ್ಯಾಯಾಲಯದಲ್ಲಿದೆ. ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡಲಿದೆ.
ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸುವ ಸಲುವಾಗಿ, ನಾನು ಅಡ್ವೊಕೇಟ್ ಜನರಲ್ ಮತ್ತು ಡಿಜಿ (ಪೊಲೀಸ್ ಮಹಾನಿರ್ದೇಶಕ) ಅವರೊಂದಿಗೆ ಮಾತನಾಡುತ್ತಿದ್ದೇನೆ. ನ್ಯಾಯ ಒದಗಿಸಲು ಏನು ಮಾಡಬೇಕೆಂದು ನಾವು ಚರ್ಚಿಸುತ್ತಿದ್ದೇವೆ ಮತ್ತು ನಮ್ಮ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲವನ್ನೂ ನಾವು ಮಾಡುತ್ತೇವೆ’ ಎಂದು ಅವರು ಹೇಳಿದರು.