ಮೂರು ದಿನಗಳಲ್ಲಿ ಸುಮಾರು 1 ಕೋಟಿ ಮಹಿಳೆಯರ ಉಚಿತ ಪ್ರಯಾಣ- 21.06 ಕೋಟಿ ರೂ ಟಿಕೆಟ್ ವೆಚ್ಚ!
ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೇರಿದರೆ ಈಡೇರಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಗೆ ಜೂನ್ 11ರಂದು ಚಾಲನೆ ನೀಡಿದೆ. ಅದರಂತೆ ಮೂರನೇ ದಿನವಾದ ಮಂಗಳವಾರ ಬರೋಬ್ಬರಿ 51.53 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರ ಪ್ರಯಾಣದ ವೆಚ್ಚ 10.82 ಕೋಟಿ ರೂ. ಆಗಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಯೋಜನೆಯ ಮೂರನೇ ದಿನವಾದ ಮಂಗಳವಾರ 20.57 ಲಕ್ಷ ಜನರು ಬೆಂಗಳೂರು ಸಿಟಿ ಬಸ್‌ಗಳಲ್ಲಿ ಉಚಿತ ಸವಾರಿ ಮಾಡಿದ್ದಾರೆ. ಇದರ ಪ್ರಯಾಣ ವೆಚ್ಚ 2.02 ಕೋಟಿ ರೂ. ಆಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ 13.98 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಇದರ ವೆಚ್ಚ ಗರಿಷ್ಠ 4.12 ಕೋಟಿ ರೂ. ಆಗಿದೆ. ಇನ್ನುಳಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ 11.09 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ 5.89 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ.
ಇದರ ಪ್ರಯಾಣ ವೆಚ್ಚ ಕ್ರಮವಾಗಿ 2.72 ಕೋಟಿ ರೂ. ಮತ್ತು 1.95 ಕೋಟಿ ರೂ. ಆಗಿದೆ. ರಾಜ್ಯದಾದ್ಯಂತ ಮಹಿಳೆಯರ ಉಚಿತ ಪ್ರಯಾಣದ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಪ್ರಮುಖ ಚುನಾವಣಾ ಪೂರ್ವ ಭರವಸೆಯಾದ ‘ಶಕ್ತಿ ಯೋಜನೆ’ಗೆ ಚಾಲನೆ ಸಿಕ್ಕ ಕೇವಲ ಮೂರು ದಿನಗಳಲ್ಲಿ 98,58,518 ಮಹಿಳೆಯರು ರಾಜ್ಯದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಇದರ ಒಟ್ಟು ಪ್ರಯಾಣದ ವೆಚ್ಚ 21.06 ಕೋಟಿ ರೂ. ಆಗಿದೆ.