ಉಡುಪಿ ಮಿಷನ್ ಆಸ್ಪತ್ರೆ: ಜೂ.15 ರಂದು ಶತಮಾನೋತ್ಸವ ಸಮರೋಪ ಸಮಾರಂಭ

ಉಡುಪಿ: ಜೂ.14, ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಶತಮಾನೋತ್ಸವ ವರ್ಷಾಚರಣೆಯು ಗುರುವಾರ ಜೂನ್ 15 ರಂದು ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ.

ಪ್ರಮುಖ ಆರೋಗ್ಯ ಸಂಸ್ಥೆಯಾಗಿ ತನ್ನ ಅಸ್ತಿತ್ವದ 100 ನೇ ವರ್ಷವನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ, ಆಸ್ಪತ್ರೆಯು ತನ್ನ ಹೊಸ ಸಿಟಿ ಸ್ಕ್ಯಾನ್ ಘಟಕವನ್ನು ಸಹ ಸಮರ್ಪಿಸಲಿದೆ. ರೂ. 1.65 ಕೋಟಿ ವೆಚ್ಚದಲ್ಲಿ ನೂತನ ಜಿಇ 32 ಸ್ಲೈಸ್ ಆಸ್ಪೈರ್ ಸಿಟಿ ಸ್ಕ್ಯಾನ್ ಯಂತ್ರವನ್ನು ಅಳವಡಿಸಲಾಗಿದ್ದು, ಈ ಹೈಟೆಕ್ ಡಯಾಗ್ನೋಸ್ಟಿಕ್ ಸೌಲಭ್ಯವನ್ನು ಆಸ್ಪತ್ರೆಯು ಉಡುಪಿಯ ಜನತೆಗೆ ಕೈಗೆಟಕುವ ದರದಲ್ಲಿ ಒದಗಿಸಲಿದೆ. ಇಂದು ಉಡುಪಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನಾ ತಿಳಿಸಿದರು.

ಸಮಾರೋಪ ಕಾರ್ಯಕ್ರಮವು ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಉಪಾಧ್ಯಕ್ಷ ರೆ.ವಿಕ್ಟರ್ ಅವರ ನೇತೃತ್ವದಲ್ಲಿ ಮಧ್ಯಾಹ್ನ 2:30ಕ್ಕೆ ಮಿಷನ್ ಆಸ್ಪತ್ರೆ ಚಾಪೆಲ್‌ನಲ್ಲಿ ಕೃತಜ್ಞತಾ ಸೇವೆಯೊಂದಿಗೆ ಪ್ರಾರಂಭವಾಗಲಿದ್ದು, ನಂತರ 4 ಗಂಟೆಗೆ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ವಿಧ್ಯುಕ್ತ ಮೆರವಣಿಗೆ ಪ್ರಾರಂಭವಾಗಲಿದೆೆ ಮತ್ತು ಮಿಷನ್ ಆಸ್ಪತ್ರೆಯಲ್ಲಿ ಮುಕ್ತಾಯವಾಗಲಿದೆ. ಸಂಜೆ 5 ಗಂಟೆಗೆ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಆವರಣದಲ್ಲಿ ಮುಖ್ಯಕಾರ್ಯಕ್ರಮ ನಡೆಯಲಿದೆ.

ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಹೇಮಚಂದ್ರ ಕುಮಾರ್ ನೂತನ ಸಿಟಿ ಸ್ಕ್ಯಾನ್ ಘಟಕವನ್ನು ಉದ್ಘಾಟಿಸಲಿರುವರು. ಬೆಂಗಳೂರಿನ ಎನ್.ಎಚ್. ಷಾ ಮಜುಂದಾರ್ ವೈದ್ಯಕೀಯ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪೌಲ್ ಸಿ. ಸಾಲಿನ್ಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಲೊಂಬಾರ್ಡ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನಾ ಅಧ್ಯಕ್ಷತೆ ವಹಿಸುವರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ, ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಖಜಾಂಚಿ ವಿನ್ಸೆಂಟ್ ಪಾಲಣ್ಣ, ಯುಬಿಎಂಸಿ ಅಧ್ಯಕ್ಷ ವಿಶಾಲ ಶಿರಿ, ವೈಎಂಸಿಎ ರಾಷ್ಟ್ರೀಯ ಮಂಡಳಿ ಉಪಾಧ್ಯಕ್ಷ ನೋಯೆಲ್ ಅಮಣ್ಣ, ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಕಾರ್ಯದರ್ಶಿ ವಿಲಿಯಂ ಕ್ಯಾರಿ ಮತ್ತು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯ ಶತಮಾನೋತ್ಸವ ವರ್ಷಾಚರಣೆ ಜೂನ್ 15, 2022 ರಂದು ಪ್ರಾರಂಭಿಸಲಾಯಿತು ಮತ್ತು ಕಳೆದ ವರ್ಷದಾಧ್ಯಂತ ವಿವಿಧ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು
ನಡೆಸಲಾಯಿತು. ನರ್ಸಿಂಗ್ ಕಾಲೇಜ್ ಬ್ಲಾಕ್, ಅಡ್ವಾನ್ಸ್ಡ್ ಲ್ಯಾಪ್ರೋಸ್ಕೋಪಿಕ್ ಮತ್ತು ಲೇಸರ್ ಸರ್ಜರಿ ಸೆಂಟರ್, ‘ವಾತ್ಸಲ್ಯ’ ಉಪಶಾಮಕ ಆರೈಕೆ ಕೇಂದ್ರ, ಕೊಳಚೆ ನೀರು ಸಂಸ್ಕರಣಾ ಘಟಕ ಮತ್ತು ಹೊಸ ಅಗ್ನಿ ಸುರಕ್ಷತಾ ಸಾಧನಗಳನ್ನು ಸೇರಿಸುವ ಮೂಲಕ ಹಲವು ಸುಧಾರಣೆಗಳನ್ನು ಅಳವಡಿಸಲಾಗಿವೆ. ಉಚಿತ ವೈದ್ಯಕೀಯ ಶಿಬಿರಗಳು, ಕಾಪು ಅಲ್ ಫಲಾಹ್ ಸಮುದಾಯ ಚಿಕಿತ್ಸಾಲಯದಲ್ಲಿ ವೈದ್ಯಕೀಯ ಶಿಬಿರಗಳು, ರಕ್ತದಾನ ಶಿಬಿರಗಳು, ಪ್ರಾರ್ಥನಾ ಶಿಬಿರಗಳು, ಅಂತರ್ ಚರ್ಚ್ ಸಂಗೀತ ಸ್ಪರ್ಧೆ ಮತ್ತು ಮಹಿಳೆಯರಿಗಾಗಿ ಅಂತರ ಚರ್ಚ್ ಥ್ರೋ ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ವೈದ್ಯರಿಗಾಗಿ ಶೈಕ್ಷಣಿಕ ಸಮ್ಮೇಳನ ಮತ್ತು ಪ್ರಾದೇಶಿಕ ಕಾರ್ಯಾಗಾರಗಳನ್ನು ನಡೆಸಲಾಗಿತ್ತು. ಕಳೆದ ವಾರ ‘ಹೀಲಿಂಗ್ ರೈನ್’ ಗೋಷ್ಠಿ ನಡೆಯಿತು.

ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಬಗ್ಗೆ ಜೂ. 15, 1923 ರಂದು ಸ್ಥಾಪಿತವಾದ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯು ಕರಾವಳಿ ಕರ್ನಾಟಕದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದೆ ಮತ್ತು ಬಹುಶಃ ಈ ಪ್ರದೇಶದಲ್ಲಿ ಮೊದಲ ತಾಯಿ-ಮಗು ಕೇಂದ್ರೀಕೃತ ಘಟಕವಾಗಿದೆ. ಇದನ್ನು ಡಾ. ಇವಾ ಲೊಂಬಾರ್ಡ್ ಎಂಬ ಯುವ ಸ್ವಿಸ್ ಮಿಷನರಿ ವೈದ್ಯೆ ಈ ಪ್ರದೇಶದ ಬಡ ಮತ್ತು ದೀನದಲಿತ ಜನರಿಗೆ ಸೇವೆ ಸಲ್ಲಿಸುವ ಉದ್ದೇಶದೊಂದಿಗೆ ಸ್ಥಾಪಿಸಿದ್ದರು. ಕೇವಲ ಆರು ಸಾಮರ್ಥ್ಯವನ್ನು ಹಾಸಿಗೆಗಳೊಂದಿಗೆ ಪ್ರಾರಂಭಗೊಂಡ ಆಸ್ಪತ್ರೆಯು ಪ್ರಸ್ತುತ 125 ಹಾಸಿಗೆಗಳ ಹೊಂದಿದೆ.

ಹಗಲುರಾತ್ರಿ ಕ್ಯಾಶುವಾಲಿಟಿ, ತೀವ್ರ ನಿಗಾ ಘಟಕ, ಆಪರೇಷನ್ ಥಿಯೇಟರ್, ಲೇಬರ್ ಥಿಯೇಟರ್, ಎಕ್ಸ್-ರೇ, ಫಾರ್ಮಸಿ, ಡಯಾಲಿಸಿಸ್ ಘಟಕ, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಪೀಡಿಯಾಟ್ರಿಕ್ಸ್, ಪ್ರಸೂತಿ ಮತ್ತು ಸ್ತ್ರಿರೋಗ, ಅರಿವಳಿಕೆ, ನೆಫ್ರಾಲಜಿ, ಕಾರ್ಡಿಯಾಲಜಿ, ಇಎನ್‌ಟಿ, ಡೆಂಟಲ್, ಆರ್ಥೋಪೆಡಿಕ್ಸ್, ಆಯುರ್ವೇದ ಮತ್ತು ಡರ್ಮಟಾಲಜಿ ಗಳಂತಹ ಎಲ್ಲಾ ಪ್ರಮುಖ ವೈದ್ಯಕೀಯ ವಿಶೇಷತೆಗಳು ಇಲ್ಲಿವೆ. ಒಂದು ಲಕ್ಷ ಚದರ ಅಡಿಗಳಷ್ಟು ವಿಸ್ತೀರ್ಣವಿರುವ ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ತರಬೇತಿ ಪಡೆದ ಅನುಭವಿ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸೇರಿದಂತೆ 170 ಸಿಬ್ಬಂದಿ ತಂಡ ಸೇವೆ ಸಲ್ಲಿಸುತ್ತಿದೆ. ಆಸ್ಪತ್ರೆಯು ಸುಮಾರು 350 ವಿದ್ಯಾರ್ಥಿಗಳಿಗೆ ನರ್ಸಿಂಗ್ ಮತ್ತು ಅರೆವೈದ್ಯಕೀಯ ವಿಜ್ಞಾನದಲ್ಲಿ ಕೋರ್ಸ್ಗಳನ್ನು ನೀಡುವ ಐದು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ, ಜೊತೆಗೆ ಶಿಶುವಿಹಾರ ಶಾಲೆಯನ್ನು ಸಹ ನಡೆಸುತ್ತಿದೆ. ಇದರ ಸಮುದಾಯ-ಆಧಾರಿತ ಉಪಕ್ರಮಗಳಲ್ಲಿ ಕರುಣಾಲಯ (ವೃದ್ಧರ ಶುಶ್ರೋಷೆ ಸೇವಾ ಕೇಂದ್ರ), ಸಹಜೀವನ ವೃದ್ಧಾಶ್ರಮ ಮತ್ತು ‘ವಾತ್ಸಲ್ಯ’ ಉಪಶಮನ ಕೇಂದ್ರ ಸೇರಿವೆ. ಆಸ್ಪತ್ರೆಯು ಪ್ರತಿ ವರ್ಷ ಹಲವು ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತದೆ. ಪ್ರಸ್ತುತ ಆಸ್ಪತ್ರೆಯು ಎನ್‌ಎಬಿಹೆಚ್ ಮಾನ್ಯತೆ ಪಡೆಯುವ ಪ್ರಕ್ರಿಯೆಯಲ್ಲಿದೆ. ಮಿಷನ್ ಆಸ್ಪತ್ರೆಯ ಶತಮಾನೋತ್ಸವ ಕನಸು ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನಾ ಅವರು ಶತಮಾನೋತ್ಸವದ ಶುಭಸಂದರ್ಭದಲ್ಲಿ ಮಿಷನ್ ಆಸ್ಪತ್ರೆ ಈಗ ಮೂರು ಸ್ಪಷ್ಟ ಉದ್ದೇಶಗಳೊಂದಿಗೆ ವಿಸ್ತರಣೆಯ ಹೊಸ ಪಯಣವನ್ನು ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ.

ಮೊದಲನೆಯದಾಗಿ, ಮುಂದಿನ ದಿನಗಳಲ್ಲಿ ಬಂಜೆತನ ಕ್ಲಿನಿಕ್, ನವಜಾತ ಶಿಶುಗಳ ಘಟಕ, ಕಾರ್ಡಿಯಾಕ್ ಕ್ಯಾಥ್ ಲ್ಯಾಬ್ ಮತ್ತು ಕ್ಯಾನ್ಸರ್’ ಸೇವೆಗಳನ್ನು ತೆರೆಯುವ ಯೋಜನೆಗಳೊಂದಿಗೆ ಮಿಷನ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸುವುದು. ಎರಡನೆಯದಾಗಿ, ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ತನ್ನ ಬ್ಯಾನರ್ ಅಡಿಯಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಉದ್ದೇಶದಿಂದ ನರ್ಸಿಂಗ್ ಮತ್ತು ಸಂಬಂಧಿತ ವೈದ್ಯಕೀಯ ಶಾಸ್ತ್ರಗಳಲ್ಲಿ ಹೆಚ್ಚಿನ ಕೋರ್ಸ್ಗಳೊಂದಿಗೆ ತನ್ನ ಶೈಕ್ಷಣಿಕ ನೆಲೆಯನ್ನು ವಿಸ್ತರಿಸುವುದು. ಇದು ಉಡುಪಿಯ ಯುವ ಜನತೆಗೆ ಸ್ಥಳೀಯವಾಗಿ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಹೊಸ ಅವಕಾಶವನ್ನು ಕಲ್ಪಿಸಲಿದೆ. ಮತ್ತು ಅಂತಿಮವಾಗಿ, ಉಡುಪಿಯ ಗ್ರಾಮೀಣ ಪ್ರದೇಶಗಳಲ್ಲಿ ಹೋಮ್ ಕೇರ್ ಸೇವೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚಿಕಿತ್ಸಾಲಯಗಳನ್ನು (ಔಟ್‌ರೀಚ್ ಕ್ಲಿನಿಕ್) ಸ್ಥಾಪಿಸುವಂತಹ ಸಮುದಾಯ ಆಧಾರಿತ ಸೇವೆಗಳನ್ನು ನೀಡುವುದು. ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸಂಸ್ಥೆಯನ್ನಾಗಿ ಮಾಡುವುದು ಮತ್ತು ಗಡಿಗಳಿಲ್ಲದ ಆಸ್ಪತ್ರೆಯನ್ನಾಗಿ ಸ್ಥಾಪಿಸುವುದು ಇದರ ಉದ್ದೇಶವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವೈದ್ಯಾಧಿಕಾರಿ ಡಾ. ಗಣೇಶ್ ಕಾಮತ್, ಪಿಆರ್‌ಓ ರೋಹಿ ರತ್ನಾಕರ್, ಆಡಳಿತಾಧಿಕಾರಿ ಡೀನಾ ಪ್ರಭಾವತಿ, ನರ್ಸಿ ಕಾಲೇಜ್ ಮುಖ್ಯಸ್ಥೆ ಸುಜಾ ಕರ್ಕಡಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!