ಶಾಂಗ್ರಿಲಾ ಹೋಟೆಲ್‌ನಲ್ಲಿ ಎಟಿಎಂ ಸರ್ಕಾರದ ಸಭೆಯ ರಹಸ್ಯವೇನು- ಬಿಜೆಪಿ ಪ್ರಶ್ನೆ
ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಯಾವುದೇ ರೀತಿಯ ಅಧಿಕೃತ ಸಂಬಂಧವಿಲ್ಲದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಬಿಬಿಎಂಪಿ ಉನ್ನತ ಅಧಿಕಾರಿಗಳ ಜತೆಗೇನು ಕೆಲಸ? ಇದು ಶೇ 85 ಡೀಲ್ ಫಿಕ್ಸಿಂಗ್ ಸಭೆಯೇ? ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರೇ ಉತ್ತರಿಸಿ’ ಎಂದು ಬಿಜೆಪಿ ಟ್ವಿಟ್ ಮಾಡಿದೆ.
ಈ ಸಂಬಂಧ ರಾಜ್ಯಪಾಲರಿಗೆ ಬುಧವಾರ ದೂರು ಸಲ್ಲಿಸುವುದಾಗಿ ಬಿಜೆಪಿ ಹೇಳಿದೆ.
‘ಜನಪಥ್ ಹಂಗಿನ ಸರ್ಕಾರವೇ??
‘ರಾಜ್ಯದಲ್ಲಿ ಇರುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರವೋ ಅಥವಾ ದಿಲ್ಲಿಯ ಜನಪಥ್ ರಸ್ತೆಯ 10ನೇ ನಂಬರ್‌ನ ಹಂಗಿನ ಸರ್ಕಾರವೋ? ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸುರ್ಜೇವಾಲಾ ಅವರು ನಡೆಸಿರುವ ಸಭೆ ಕುರಿತು ಟೀಟ್ ಮಾಡಿರುವ ಅವರು, ‘ಸುರ್ಜೇವಾಲಾ ಅವರಿಗೆ ಸರ್ಕಾರದ ಸಭೆಗಳನ್ನು ನಡೆಸುವ ಜವಾಬ್ದಾರಿ, ಅವಕಾಶ ಕೊಟ್ಟವರು ಯಾರು? ಮುಖ್ಯಮಂತ್ರಿ ಉತ್ತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಕನ್ನಡಿಗರು ಮತಹಾಕಿರುವುದು ‘ಕೈ’ ಸರ್ಕಾರಕ್ಕೂ ಅಥವಾ ‘ಕೈಗೊಂಬೆ’ ಸರ್ಕಾರಕ್ಕೋ? ಜನರ ವೋಟು ಹಂಗಿನ ಸರ್ಕಾರದ ಪಾಲಾಗಿದೆ ಎನ್ನುವುದು ಸರ್ಕಾರಕ್ಕೆ ತಿಂಗಳು ತುಂಬುವ ಮೊದಲೇ ಸಾಬೀತಾಗಿದೆ ಎಂದೂ ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.
ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಮಂಗಳವಾರ ನಡೆಸಿದ ಬೆಂಗಳೂರಿನ ಕಾಂಗ್ರೆಸ್ ಜನಪ್ರತಿನಿಧಿಗಳ ಸಭೆಯಲ್ಲಿ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭಾಗಿಯಾಗಿರುವುದು ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿದೆ.
ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರಿನ ಸಚಿವರು, ಶಾಸಕರು ಮತ್ತು ಕಾಂಗ್ರೆಸ್ಸಿನ ಕೆಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಸರ್ಕಾರ ರಚಿಸಿದ ‘ತಜ್ಞರ ಸಮಿತಿ’ ಅಧ್ಯಕ್ಷ, ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ಮತ್ತು ಸಮಿತಿಯ ಸದಸ್ಯ ಸಿದ್ದಯ್ಯ ಭಾಗಿಯಾಗಿದ್ದರು.