ಬೊಮ್ಮಾರಬೆಟ್ಟು ಗ್ರಾ.ಪಂ ಅಧ್ಯಕ್ಷ ಸುರೇಶ್ ನಾಯಕ್ ದಂಪತಿಗೆ ಕೊಲೆ ಬೆದರಿಕೆ- ಸೂಕ್ತ ಕ್ರಮಕ್ಕೆ ಎಸ್ಪಿಗೆ ಕಾಂಗ್ರೆಸ್ ಮನವಿ
ಉಡುಪಿ ಬೊಮ್ಮಾರಬೆಟ್ಟು ಗ್ರಾಪಂ ಅಧ್ಯಕ್ಷ ಸುರೇಶ್ ನಾಯಕ್ ದಂಪತಿಗೆ ಕೊಲೆ ಬೆದರಿಕೆಯೊಡ್ಡಿರುವ ಸ್ಥಳೀಯ ಬಿಜೆಪಿ ಮುಖಂಡರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ನಿಯೋಗ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ಅವರಿಗೆ ಸಲ್ಲಿಸಿದರು.
ಬೊಮ್ಮಾರಬೆಟ್ಟು ಗ್ರಾಪಂ ಬಿಜೆಪಿ ಬೆಂಬಲಿತ ಸದಸ್ಯ ಸುನೀಲ್ ಶೆಟ್ಟಿ, ಸನತ್ ಶೆಟ್ಟಿ, ಪ್ರಸಾದ್ ಕೊಂಡಾಡಿ, ರವಿ ಶೆಟ್ಟಿ ಎಂಬವರು ಮೇ 13ರಂದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯ ಹಿರಿಯಡ್ಕ ರಾಮ ಮಂದಿರದ ಎದುರುಗಡೆಯಲ್ಲಿರುವ ಸುರೇಶ್ ನಾಯಕ್ ಅವರ ತರಕಾರಿ ಮಾರಾಟದ ಅಂಗಡಿ ಎದುರು ಪಟಾಕಿ ಸಿಡಿಸಿದರು. ನಂತರ ಅಂಗಡಿಯ ಹತ್ತಿರ ಬಂದು ಬೊಬ್ಬೆ ಹಾಕಿ ಅಂಗಡಿಯಲ್ಲಿದ್ದ ಸುರೇಶ್ ನಾಯಕ್ ಅವರ ಪತ್ನಿ ಪ್ರೇಮಾ ನಾಯಕ್ ಅವರಲ್ಲಿ ಸುರೇಶ್ ನಾಯಕ್ ಅವರಿಗೆ ಬೈದಿದ್ದಾರೆ ಎಂದು ದೂರಲಾಗಿದೆ.
ಇದನ್ನು ಪ್ರೇಮಾ ನಾಯಕ್ ವಿಡಿಯೋ ಚಿತ್ರೀಕರಣವನ್ನು ಮಾಡುತ್ತಿದ್ದು, ಅಂಗಡಿ ಒಳಗೆ ಅಕ್ರಮ ಪ್ರವೇಶ ಮಾಡಿದ ಆರೋಪಿಗಳು, ಪ್ರೇಮಾ ಅವರ ಕೈ ಹಿಡಿದು ಹಲ್ಲೆ ನಡೆಸಿ ಅವಾಚ್ಯಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದರು. ಅಲ್ಲದೆ ಅವರ ಕೈಯಲ್ಲಿದ್ದ ಮೊಬೈಲ್ ಎಳೆದು ವಿಡಿಯೋ ಡಿಲೀಟ್ ಮಾಡಿ ದ್ದಾರೆ. ಬಳಿಕ ತೀರಾ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಮೇ 13ರಂದು ನೀಡಿದ ದೂರಿನ ಕುರಿತು ಹಿರಿಯಡಕ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆಸಿ ವಿಚಾರಣೆಯನ್ನು ನಡೆಸದೆ ಎನ್ಸಿಆರ್ ನೀಡಿದ್ದು, ಆರೋಪಿಗಳು ನಮ್ಮ ವಿರುದ್ಧ ಮತ್ತೆ ದುಷ್ಕೃತ್ಯ ನಡೆಸಲು ಒಳಸಂಚು ನಡೆಸುತ್ತಿದ್ದಾರೆ. ಆದುದರಿಂದ ಆರೋಪಿಗಳ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಜರಗಿಸಬೇಕು ಮತ್ತು ಸುರೇಶ್ ನಾಯಕ್ ದಂಪತಿಗೆ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬೊಮ್ಮಾರಬೆಟ್ಟು ಗ್ರಾಪಂ ಅಧ್ಯಕ್ಷ ಸುರೇಶ್ ನಾಯಕ್, ಪತ್ನಿ ಪ್ರೇಮಾ ನಾಯಕ್, ಮುಖಂಡರಾದ ಪ್ರಶಾಂತ್ ಜತ್ತನ್ನ, ಸಂತೋಷ್ ಕುಲಾಲ್, ಚರಣ್ ವಿಠಲ್, ಜಲ್ಲೇಶ್ ಶೆಟ್ಟಿ, ರೋಯಿಸ್ ಫೆರ್ನಾಂಡೀಸ್ ಮೊದಲಾದವರು ಉಪಸ್ಥಿತರಿದ್ದರು.