ಬಿಜೆಪಿಯವರು ಭವಿಷ್ಯ ನುಡಿಯುವುದಾದರೆ ದೇವಸ್ಥಾನದ ಎದುರು ಕುಳಿತುಕೊಳ್ಳಲಿ- ಸವದಿ
ವಿಜಯಪುರ: ‘ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಭವಿಷ್ಯ ನುಡಿಯೋಕೆ ಬಿಜೆಪಿಯವರು ಯಾರು? ಅವರು ಭವಿಷ್ಯ ನುಡಿಯುವುದಾದರೆ ಹೊತ್ತಿಗೆ ತೆಗೆದುಕೊಂಡು ದೇವಸ್ಥಾನದ ಎದುರು ಕುಳಿತುಕೊಳ್ಳಲಿ. ಜನರು ಹಣ ಇಟ್ಟು ಕಾಣಿಕೆ ಕೊಟ್ಟು ಭವಿಷ್ಯ ಕೇಳುತ್ತಾರೆ’ ಎಂದು ಅಥಣಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಲೇವಡಿ ಮಾಡಿದ್ದಾರೆ.
ರವಿವಾರ ಜಿಲ್ಲೆಯ ಇಂಡಿ ತಾಲೂಕಿನ ಸುಕ್ಷೇತ್ರ ಇಂಚಗೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಗ್ಯಾರಂಟಿಗಳ ಜಾರಿ ಸಾಧ್ಯವಿಲ್ಲ’ ಎಂದು ಟೀಕೆ ಮಾಡಿಯೇ ಅಧಿಕಾರದಲ್ಲಿದ್ದ ಬಿಜೆಪಿ ಇದೀಗ 65 ಸ್ಥಾನಗಳಿಗೆ ಕುಸಿದಿದೆ. ಒಳ್ಳೆಯ ಕೆಲಸ ಮಾಡುವ ಸರಕಾರಕ್ಕೆ ಬೆಂಬಲ ನೀಡುವ ಬದಲಿಗೆ ಅನಗತ್ಯ ಟೀಕೆ ಸರಿಯಲ್ಲ’ ಎಂದು ಆಕ್ಷೇಪಿಸಿದರು.
‘ಶಾಸಕನಾಗಿ ಆಯ್ಕೆಯಾದ ಮೇಲೆ ಸಚಿವನಾಗಬೇಕೆಂಬ ಆಸೆ ಎಲ್ಲರಿಗೂ ಸಹಜ. ಕಾಂಗ್ರೆಸ್ ಪಕ್ಷದಲ್ಲಿ 135 ಮಂದಿ ಆಯ್ಕೆಯಾಗಿದ್ದು, ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಹಿರಿಯರು ಆಯ್ಕೆಯಾಗಿದ್ದು, ಎಲ್ಲರಿಗೂ ಪ್ರಾತಿನಿಧ್ಯ ನೀಡಬೇಕಿದೆ. ಅಪೇಕ್ಷೆ ಪಡುವುದು ತಪ್ಪಲ್ಲ. ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ’ ಎಂದು ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದರು.