‘ನಮ್ಮನ್ನು ಅವಿವೇಕಿಯನ್ನಲು ಬಿ.ಸಿ. ಪಾಟೀಲ್ ಯಾರು’?: ರೈತರ ಆಕ್ರೋಶ

ಬೆಂಗಳೂರು: ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ವಿರೋಧಿಸಿ ರೈತರು ರಾಜಧಾನಿಯಲ್ಲಿ ಬೀದಿಗಿಳಿದಿದ್ದು, ಸಾವಿರಾರು ಸಂಖ್ಯೆಯಲ್ಲಿ ರೈತರು ನಗರಕ್ಕೆ ಆಗಮಿಸಿ, ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಸಿದ ರೈತರು ಅಲ್ಲಿ ಸಮಾವೇಶಗೊಂಡಿದ್ದು, ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಕೂಡ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಈ ವೇಳೆ ಮಾತನಾಡಿದ ಯೋಗೇಂದ್ರ ಯಾದವ್, ಕರ್ನಾಟಕ ವಿಧಾನಸಭೆ ಭೂ ಸುಧಾರಣೆ ಕಾನೂನು ತಿದ್ದುಪಡಿ ಮಾಡಲು ಹೊರಟಿದೆ, ಆದರೆ ಇದು ಭೂ ಸುಧಾರಣೆಗಾಗಿ ಮಾಡುತ್ತಿರುವ ತಿದ್ದುಪಡಿಯಲ್ಲ, ಬದಲಾಗಿ ಭೂಮಿಯನ್ನು ನಾಶಪಡಿಸಲು ಮಾಡುತ್ತಿರುವ ತಿದ್ದುಪಡಿ. ರೈತರು ಇಡೀ ದೇಶದಲ್ಲಿ ಎದ್ದು ನಿಂತಿದ್ದಾರೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ರೈತ ಮಹಿಳೆ ಮಂಜುಳಾ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಹರಿಹಾಯ್ದ ಅವರು, ಬಿ.ಸಿ.ಪಾಟೀಲ್ ಅವಿವೇಕಿ, ನಮ್ಮನ್ನು ಅವಿವೇಕಿಯನ್ನಲು ಆತ ಯಾರು ಎಂದು ಕಿಡಿಕಾರಿದರು.

ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೊರೊನಾ ಹೆಸರಿನಲ್ಲಿ ಜನರನ್ನು ಮೌನವಾಗಿಸಿ ತಮಗೆ ಬೇಕಾದ ರೀತಿಯಲ್ಲಿ ಕಾಯ್ದೆಗಳನ್ನು ತಿದ್ದುಪಡಿ ತರಲು ನರೇಂದ್ರ ಮೋದಿ ಮುಂದಾಗಿದ್ದಾರೆ. ಆದರೆ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್ ಮೊದಲಾದವರು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಮುಂಜಾನೆಯೇ ಸಾವಿರಾರು ರೈತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ರೈತರು ಆನಂದ್ ರಾವ್ ವೃತ್ತದವರೆಗೆ ಜಾಥಾ ನಡೆಸಿದರು. ಭದ್ರತೆಗಾಗಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಫ್ರೀಡಂ ಪಾರ್ಕ್ ನಲ್ಲಿ ರೈತರೊಬ್ಬರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು.

Leave a Reply

Your email address will not be published. Required fields are marked *

error: Content is protected !!