ಸಂಘ ಪರಿವಾರಕ್ಕೆ ನೀಡಿದ ಭೂಮಿ ವಾಪಸ್ ಪಡೆಯುವುದು ಸರಿಯಲ್ಲ- ಕೋಟ
ಬೆಂಗಳೂರು, ಜೂ.10: ‘ಸಂಘ ಪರಿವಾರದವರಿಗೆ ಕೊಟ್ಟ ಭೂಮಿಯನ್ನು ವಾಪಸ್ ಪಡೆಯುತ್ತೇವೆ ಎನ್ನುವ ಸರಕಾರದ ಧೋರಣೆ ಸರಿಯಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ ಎನ್ನುವರರ ದೃಷ್ಟಿಯಲ್ಲಿ ಪರಿವಾರದವರು ಕಡಿಮೆ ಸಮಾನರೆ’ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.
ಶನಿವಾರ ಬಿಜೆಪಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರದ ಭ್ರಷ್ಟಾಚಾರ, ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಹಾಗಿದ್ದಲ್ಲಿ, ರಾಜ್ಯ ಸರಕಾರವು ತಮ್ಮ ಇಲಾಖೆಯಿಂದಲೇ ತನಿಖೆಯನ್ನು ಪ್ರಾರಂಭಿಸಲಿ ಎಂದು ಕೋರಿದರು.
ಬಿಜೆಪಿಯವರನ್ನು ದಲಿತ ವಿರೋಧಿಗಳು ಎಂದು ಕರೆದಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಅವರು, ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿಯವರಿಗೆ ಶೇ.15ರ ಬದಲಾಗಿ ಶೇ.17ರಷ್ಟು ಮೀಸಲಾತಿ ನೀಡಿದ್ದು ಬಿಜೆಪಿ ಸರಕಾರ. ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ ಸರಕಾರ ಎಂದು ಅವರು ಹೇಳಿದರು.
ಜಿಜ್ಞಾಸೆಗಳು ಇರಬಹುದು. ಆದರೆ, ಸಮಾಜದ ಕಟ್ಟಕಡೆಯ ಮನುಷ್ಯ ಮುಖ್ಯವಾಹಿನಿಗೆ ಬರಬೇಕು ಎಂಬ ಕಾರಣಕ್ಕಾಗಿ ಒಳ ಮೀಸಲಾತಿಯನ್ನು ನಮ್ಮ ಪಕ್ಷ ಪ್ರಕಟಿಸಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟ ಪಕ್ಷ ನಮ್ಮದು. ಅಂಬೇಡ್ಕರ್ ಅವರ ವಿಚಾರದ ಪ್ರತಿಪಾದನೆ,ಭಾಷಣ ಮಾಡುವುದು ಬೇರೆ. ಹೆಸರನ್ನು ಘೋಷಣೆ ಮಾಡುವುದು ಬೇರೆ. ಅಂಬೇಡ್ಕರ್ ಭೇಟಿ ನೀಡಿದ ಜಗತ್ತಿನ ಎಲ್ಲಾ ಸ್ಥಳಗಳನ್ನು ಅಭಿವೃದ್ಧಿ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ಸರಕಾರ ಎಂದರು.