ಪ್ರವಾಹಕ್ಕೆ ಭಾರೀ ಹಾನಿ: ಗರಿಷ್ಟ ಪರಿಹಾರಕ್ಕೆ ಕಾಂಗ್ರೆಸ್ ಮುಖಂಡ ಕಾಂಚನ್ ಆಗ್ರಹ

ಉಡುಪಿ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಪ್ರವಾಹ ಉಂಟಾಗಿದ್ದು ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ನಡೆದಿದೆ. ಈಗಾಗಲೇ ಭಾರೀ‌ಮಳೆಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು ಹಲವರು ಮನೆ ಮಠ ಕಳೆದುಕೊಂಡಿದ್ದಾರೆ. ಹಲವು ಸೇತುವೆಗಳು ಜಲಾವೃತವಾಗಿ  ಅಪಾಯದ ಸ್ಥಿತಿಯಲ್ಲಿದ್ದರೆ, ಹಲವು ರಸ್ತೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಮನೆಗೆ ನೀರು ನುಗ್ಗಿದ ಕಾರಣ ಮನೆ ಮಂದಿ ಅತಂತ್ರದಲ್ಲಿದ್ದಾರೆ‌.

ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಈ ಮಳೆ ಗಾಯದ ಮೇಲೆ ಬರೆ ಎಳೆದಿದೆ. ವಿವಿಧ ಇಲಾಖೆಗಳಿಗೆ ಕೋಟ್ಯಾಂತರ ರೂ ನಷ್ಟ ಉಂಟಾಗಿದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ತುರ್ತಾಗಿ ಸ್ಪಂದಿಸಿ ಜಿಲ್ಲೆಗೆ ಗರಿಷ್ಟ ಪರಿಹಾರ ಘೋಷಿಸಬೇಕು. ಮಾತ್ರವಲ್ಲದೇ ಕೇಂದ್ರದಿಂದಲೂ ಪರಿಹಾರ ಒದಗಿಸುವಂತೆ ಒತ್ತಡ ಹಾಕಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಸಹ ಸರಕಾರ, ಮುಖ್ಯಮಂತ್ರಿಗಳ‌ ಮೇಲೆ ಒತ್ತಡ ತಂದು ಗರಿಷ್ಟ ಪರಿಹಾರಕ್ಕೆ ಪ್ರಯತ್ನಿಸಬೇಕು  ಈ ಮೂಲಕ ಜನರ ನೆರವಿಗೆ ಸರಕಾರ ಧಾವಿಸಬೇಕು ಎಂದು ಕಾಂಗ್ರೆಸ್ ಮುಖಂಡ, ನಗರಸಭಾ ಸದಸ್ಯ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.

ಕೆಮ್ಮಣ್ಣು ಕುದ್ರು ತೂಗುಸೇತುವೆಯ ಬಳಿ, ಕೊಡವೂರು ಕಂಬಳಕಟ್ಟೆ ಹಾಗೂ ಬೆಳ್ಳಂಪಳ್ಳಿ ಮುಂತಾದ ಪ್ರದೇಶದಲ್ಲಿ ಅತಿಯಾದ ಮಳೆಯಿಂದ ಜಲಾವೃತಗೊಂಡಿರುವ ಪ್ರದೇಶಗಳಿಗೆ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್‌ರವರು ಭೇಟಿ ನೀಡಿ ಸಂಕಷ್ಟದಲ್ಲಿರುವ ಜನರೊಂದಿಗೆ ಇದ್ದು, ಬೇಕಾದಂತಹ ಸಹಾಯ ಮಾಡಿ ಅವರಿಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾದ ಆರ್.ಕೆ ರಮೇಶ್, ಗಣೇಶ್ ನೆರ್ಗಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಗಣೇಶ್ ದೇವಾಡಿಗ ಹಾಗೂ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಕಷ್ಟದಲ್ಲಿದ್ದ ಜನರ ಸಹಾಯಕ್ಕೆ ಕೈ ಜೋಡಿಸಿದರು.

Leave a Reply

Your email address will not be published. Required fields are marked *

error: Content is protected !!