ಆಂಧ್ರಪ್ರದೇಶದಲ್ಲಿ ಮೀನಿನ ಲಾರಿ ಅಪಘಾತ: ಉಚ್ಚಿಲ ನಿವಾಸಿ ದುರ್ಮರಣ
ಆಂಧ್ರಪ್ರದೇಶದ ನಂಬೂರು ಎಂಬಲ್ಲಿ ನಡೆದ ಅಪಘಾತವೊಂದರಲ್ಲಿ ಉಚ್ಚಿಲ ಭಾಸ್ಕರನಗರದ ನಿವಾಸಿ ಬಷೀರ್ ಎಂಬವರು ಸಾವಿಗೀಡಾದ ಘಟನೆ ಇಂದು ನಡೆದಿದೆ.
ಮೀನಿನ ಲಾರಿಯಲ್ಲಿ ಚಾಲಕನಾಗಿದ್ದ ಬಷೀರ್, ಗುರುವಾರ ಆಂಧ್ರಪ್ರದೇಶದ ನಂಬೂರು-ಕಝ ರಸ್ತೆಯಲ್ಲಿ ಸಾಗುತಿದ್ದ ವೇಳೆ ನಿಯಂತ್ರಣ ತಪ್ಪಿ ಲಾರಿಯೊಂದಕ್ಕೆ ಡಿಕ್ಕಿ ಹೊಡಿದಿದೆ. ಈ ಭೀಕರ ಅಪಘಾತದಲ್ಲಿ ಬಷೀರ್ ಸಾವಿಗೀಡಾಗಿದ್ದಾರೆ. ಜೊತೆಗೆ ಡಿಕ್ಕಿಯಾದ ಲಾರಿಯ ಚಾಲಕ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಗೋವಾ ಮೂಲದ ಮೀನಿನ ಲಾರಿಯಲ್ಲಿ ಚಾಲಕನಾಗಿರುವ ಬಷೀರ್, ಓರ್ವ ಉತ್ತಮ ಕ್ರಿಕೆಟಿಗನಾಗಿಯೂ ಹೆಸರುಗಳಿಸಿದ್ದರು. ಮೀನು ಸಾಗಾಟಕ್ಕಾಗಿ ಮಂಗಳವಾರ ಚೆನ್ನೈಗೆ ತೆರಳಿದ್ದ ಬಷೀರ್, ಅಲ್ಲಿ ಲಾರಿಯಲ್ಲಿ ಮೀನು ತುಂಬಿಸಿಕೊಂಡು ಒಡಿಶಾಕ್ಕೆ ತೆರಳುತ್ತಿದ್ದರು. ಆಂಧ್ರಪ್ರದೇಶದ ನಂಬೂರು-ಕಝ ರಸ್ತೆಯಲ್ಲಿ ಸಾಗುತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಉಚ್ಚಿಲ ಭಾಸ್ಕರನಗರದ ಶಾಬುದ್ದೀನ್- ನಬಿಸಾ ಪುತ್ರನಾಗಿರುವ ಬಷೀರ್, ಬೆಳಪುವಿನಲ್ಲಿ ಮನೆ ಮಾಡಿಕೊಂಡಿದ್ದರು. ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದು, ಅವರ ಮೃತದೇಹವನ್ನು ಹುಟ್ಟೂರು ಉಚ್ಚಿಲಕ್ಕೆ ತರಲು ಅವರ ಸಹೋದರರು ಹಾಗು ಗೆಳೆಯರು ಆಂಧ್ರಪ್ರದೇಶಕ್ಕೆ ಹೊರಟಿದ್ದಾರೆ. ಮೃತದೇಹ ತರಲು ಒಂದೆರೆಡು ದಿನ ಬೇಕಾಗಿದ್ದು, ಅವರ ಅಗಲಿಕೆಯಿಂದ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.