ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಸಾಧ್ಯತೆ ಎಂದ ಬೊಮ್ಮಾಯಿ: ಮೋದಿ ಸರ್ಕಾರದ ನಡೆ ಟೀಕಿಸಿದ ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಹಲವಾರು ವಿವಾದಾತ್ಮಕ ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದೆ. ಹಿಂದಿನ ಬಿಜೆಪಿ ಆಡಳಿತದಲ್ಲಿ ಮಾಡಿದ ಎಲ್ಲಾ ಜನವಿರೋಧಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಕಾಂಗ್ರೆಸ್ ಸರ್ಕಾರ ಸ್ಪಷ್ಟಪಡಿಸಿದೆ. ಗೋಹತ್ಯೆ ನಿಷೇಧ ಕಾನೂನನ್ನು ರದ್ದುಗೊಳಿಸುವ ವಿಚಾರ ಎರಡು ಪಕ್ಷಗಳ ನಾಯಕರ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಹದಿನೈದು ದಿನಗಳು ಕಳೆದಿಲ್ಲ. ಆದರೆ, ಪ್ರತಿ ಬಾರಿಯೂ ಜೈಲು ಶಿಕ್ಷೆಯ ಎಚ್ಚರಿಕೆ ನೀಡುವ ಸಚಿವರ ಪುನರಾವರ್ತಿತ ಹೇಳಿಕೆಗಳು 1975ರಲ್ಲಿನ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್‌ನ ತಂತ್ರವನ್ನು ನೆನಪಿಸುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಹೇಳಿದರು.
ಜನರು ಈಗ ನೀಡಿರುವ ಜನಾದೇಶವು ಪ್ರತಿಪಕ್ಷಗಳನ್ನು ತುಳಿದು ಹಾಕುವುದಕ್ಕಾಗಿ ಎಂದು ಆರಂಭದ ಹಂತದಲ್ಲಿಯೇ ಯೋಚಿಸಿದರೆ, ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಬೊಮ್ಮಾಯಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ಗೋಹತ್ಯೆ ನಿಷೇಧ ಕಾನೂನು, ಪಠ್ಯಪುಸ್ತಕ ಪರಿಷ್ಕರಣೆ ಕುರಿತಂತೆ ಕಾಂಗ್ರೆಸ್ ಸಚಿವರ ಹೇಳಿಕೆಗಳ ಕುರಿತು ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ನಾಯಕರಿಗೆ ಈಗಾಗಲೇ ಅಧಿಕಾರದ ಮದ ಏರಿದೆ. ಕೆಲವು ಸಚಿವರ ಹೇಳಿಕೆಗಳನ್ನು ಗಮನಿಸಿದರೆ, ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಂಡ ರೀತಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ಪ್ರತಿಪಕ್ಷಗಳ ಧೋರಣೆಯನ್ನು ಉರುಳಿಸುತ್ತೇವೆ ಎಂಬ ಶೈಲಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಕರ್ನಾಟಕ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ತಲೆದೋರುವ ಸಾಧ್ಯತೆ ಕಾಣುತ್ತಿದೆ. ಅಧಿಕಾರಿಗಳು ಕೆಲಸ ಮಾಡದಿದ್ದರೆ ಚಾಕುವಿನಿಂದ ಹೊಡೆಯುತ್ತೇವೆ, ಜೈಲಿಗೆ ಹಾಕುತ್ತೇವೆ ಎಂದು ಸ್ವತಃ ಸಚಿವರೇ ಹೇಳುತ್ತಿದ್ದಾರೆ. ಜನರು ಜನಾದೇಶ ಕೊಟ್ಟಿದ್ದು ಜನಸೇವೆ ಮಾಡಲು ಹೊರತು ಅದನ್ನು ದುರುಪಯೋಗ ಮಾಡಿಕೊಳ್ಳಲು ಅಲ್ಲ. ವಿರೋಧ ಪಕ್ಷವಾಗಿ ನಾವು ಸುಮ್ಮನಿರುವುದಿಲ್ಲ. ಕಾಂಗ್ರೆಸ್ ಯಾರನ್ನು ಬೇಕಾದರೂ ಜೈಲಿಗೆ ಹಾಕಲಿ. ಜನರು ನಿಮ್ಮ ವಿರುದ್ಧ ತಿರುಗಿಬಿದ್ದರೆ, ಜೈಲುಗಳು ಸಾಕಾಗುವುದಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.
ತಮಗೆ ಜನಾದೇಶ ನೀಡಿದ ಜನರ ಮೇಲೆಯೇ ಪ್ರಾಬಲ್ಯ ಸಾಧಿಸಲು ಇದೇನು ಇಸ್ಲಾಂ ರಾಷ್ಟ್ರವಲ್ಲ. ಜನರು ಪ್ರಜಾಪ್ರಭುತ್ವದ ಕೀಲಿಯನ್ನು ಹಿಡಿದಿರುವುದರಿಂದ ನಾವು ತುರ್ತು ಪರಿಸ್ಥಿತಿಯನ್ನು ಹೇರಲು ಅನುಮತಿ ನೀಡುವುದಿಲ್ಲ. ಈ ಬೆಳವಣಿಗೆಗೆ ನಾವು ಯಾವುದೇ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಸಚಿವ ದಿನೇಶ್ ಗುಂಡೂರಾವ್ ತಿರುಗೇಟು
ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ‘ಮಿಸ್ಟರ್ ಬೊಮ್ಮಾಯಿಯವರೇ, ಯಾವ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುತ್ತಿದ್ದೀರಿ? ತನ್ನ ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಾಕ್ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವ ನಿಮ್ಮ ಮೋದಿ ಸರ್ಕಾರದ ನಡೆ ನಿಮಗೆ ತುರ್ತುಪರಿಸ್ಥಿತಿ ಎಂದು ಅನ್ನಿಸುತ್ತಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
ಚುನಾವಣೆಯಲ್ಲಿ ಸೋತ ನಂತರ ಬಿಜೆಪಿಯವರು ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿದ್ದಾರೆ. ಬೊಮ್ಮಾಯಿಯವರೇ ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ತುರ್ತು ಪರಿಸ್ಥಿತಿಯ ಲಕ್ಷಣವಲ್ಲ. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಜವಬ್ಧಾರಿಯುತ ಸರ್ಕಾರದ ಆದ್ಯ ಕರ್ತವ್ಯ. ನಮ್ಮ ಸರ್ಕಾರ ಕೂಡ ಅದನ್ನೇ ಮಾಡುತ್ತಿದೆ’ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
‘ಬೊಮ್ಮಾಯಿಯವರೇ, ಜವಾಬ್ಧಾರಿಯುತ ಸರ್ಕಾರವಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮ ಕರ್ತವ್ಯ. ಕಾನೂನನ್ನು ಉಲ್ಲಂಘಿಸುವವರ, ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಮ್ಮ ಪ್ರಕಾರ ತುರ್ತುಪರಿಸ್ಥಿತಿ ಯಾದರೆ, ನಿಮ್ಮ ವಿವೇಚನಾ ಶಕ್ತಿಯ ಬಗ್ಗೆ ಅನುಕಂಪವಿದೆ. ನೀವು ಕಾನೂನು ಉಲ್ಲಂಘಿಸುವವರ ಪರವೇ?’ ಎಂದು ಪ್ರಶ್ನಿಸಿದ್ದಾರೆ.