ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು:ಜಿಲ್ಲಾಧಿಕಾರಿ
ಉಡುಪಿ: ಅನ್ಯ ರಾಜ್ಯ ಮತ್ತು ವಿದೇಶಗಳಿಂದ ಬಂದು ಉಡುಪಿ ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿದ ಜನರನ್ನು ಇಂದು ಕ್ವಾರಂಟೈನ್ ಕೇಂದ್ರಗಳಿಂದ ಮನೆಗೆ ಕಳುಹಿಸಲಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್, ಏಳು ದಿನ ಕ್ವಾರಂಟೈನ್ ಮುಗಿಸಿದವರು ಮುಂದಿನ ಏಳು ದಿನ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಒಟ್ಟು 14 ದಿನ ಕ್ವಾರಂಟೈನ್ ನಲ್ಲಿ ಇದ್ದವರು ಮುಂದಿನ 14 ದಿನಗಳ ಕಾಲ ರಿಪೋರ್ಟಿಂಗ್ ಅವಧಿಯಲ್ಲಿ ಇರುತ್ತಾರೆ. ಇವರಲ್ಲಿ ಯಾವುದೇ ರೀತಿಯ ಸೋಂಕು ಲಕ್ಷಣಗಳು ಕಂಡು ಬಂದರೆ ಕೂಡಲೇ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.
ಹೋಂ ಕ್ವಾರಂಟೈನ್ ನಿಯಮ ಪಾಲನೆ ಉಲ್ಲಂಘಿಸಿದರೆ ಕ್ರಮಕೈಗೊಳ್ಳಲಾಗುವುದು. ಹೋಂ ಕ್ವಾರಂಟೈನ್ ನಲ್ಲಿ ಇರುವವರು ಕ್ವಾರಂಟೈನ್ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಮನೆಯಿಂದ ಹೊರ ಬಂದರೆ ಮೊದಲ ಬಾರಿಗೆ ಎಚ್ಚರಿಕೆ ನೀಡಲಾಗುವುದು, ಎರಡನೇ ಬಾರಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.