‘ಗೃಹಜ್ಯೋತಿ’ ಯೋಜನೆ ಆ.1ರಿಂದ ಜಾರಿ: ಯಾರೆಲ್ಲ ಅರ್ಹರು, ಅರ್ಜಿ ಸಲ್ಲಿಕೆ ಹೇಗೆ…?
ಬೆಂಗಳೂರು: ಜೂ. (ಉಡುಪಿ ಟೈಮ್ಸ್ ವರದಿ) ರಾಜ್ಯದಲ್ಲಿ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುವ ಪ್ರತಿಯೊಬ್ಬರ ಮನೆಗೆ ಸರ್ಕಾರದಿಂದ ನೀಡಲಾಗುವ ‘ಗೃಹಜ್ಯೋತಿ’ ಯೋಜನೆಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಇಂಧನ ಸಚಿವ ಕೆ ಜೆ ಜಾರ್ಜ್ ಬೆಂಗಳೂರಿನ ಬೆಸ್ಕಾಂ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಗೃಹಜ್ಯೋತಿ ಯೋಜನೆಯನ್ನು ನಾಗರಿಕರು ಪಡೆಯುವುದು ಹೇಗೆ, ಯಾವ ರೀತಿ ಅರ್ಜಿ ಸಲ್ಲಿಸಬೇಕು, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು.
ಆಗಸ್ಟ್ 1ರಿಂದ ಗೃಹಜ್ಯೋತಿ ಯೋಜನೆ ಜಾರಿಗೆ ಬರಲಿದ್ದು, ಜೂನ್ ತಿಂಗಳ ವಿದ್ಯುತ್ ಶುಲ್ಕವನ್ನು ನಾಗರಿಕರು ಕಡ್ಡಾಯವಾಗಿ ಪಾವತಿಸಬೇಕು. ಜುಲೈ ತಿಂಗಳ ಬಿಲ್ ಆಗಸ್ಟ್ ತಿಂಗಳಿನಲ್ಲಿ ಪಾವತಿ ಮಾಡುವುದು ಬೇಡ. ರಾಜ್ಯದಲ್ಲಿ 2.16 ಕೋಟಿ ಗ್ರಾಹಕರು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದು 200 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡುವವರು 2 ಲಕ್ಷ ಮಂದಿಯಿದ್ದಾರೆ. ರಾಜ್ಯದ 2 ಕೋಟಿ 14 ಲಕ್ಷ ಜನರಿಗೆ ಈ ಯೋಜನೆಯಿಂದ ಲಾಭವಾಗಲಿದೆ ಎಂದು ತಿಳಿಸಿದರು.
12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಮೇಲೆ ಶೇ.10 ರಷ್ಟು ಹೆಚ್ಚು ಬಳಕೆಗೆ ಅವಕಾಶ ನೀಡುತ್ತೇವೆ. ಸರಾಸರಿ ಬಳಕೆಗೆ ಶೇಕಡಾ 10ರಷ್ಟು ಸೇರಿಸಿ ಹೆಚ್ಚು ವಿದ್ಯುತ್ ನೀಡುತ್ತೇವೆ ಎಂದು ಸಚಿವರು ಹೇಳಿದರು.
ಗೃಹಜ್ಯೋತಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?: 200 ಯೂನಿಟ್ ಒಳಗೆ ವಿದ್ಯುತ್ ಬಳಸಿದರೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ಜನತೆಗೆ ದೊರೆಯುತ್ತಿದ್ದು ಇದು ಗೃಹ ಬಳಕೆಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಬಳಕೆಗೆ ಇದು ಅನ್ವಯವಾಗುವುದಿಲ್ಲ. ಸ್ವಂತ ಮನೆ ಇರಲಿ, ಬಾಡಿಗೆ ಮನೆಯಿರಲಿ ಕರಾರು ಪತ್ರ ಕಡ್ಡಾಯವಾಗಿರುತ್ತದೆ.
ಗೃಹ ಜ್ಯೋತಿ ಯೋಜನೆಗೆ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು. ಜೊತೆಗೆ ಇಲಾಖೆ ಇದಕ್ಕಾಗಿಯೇ ಹೊಸ ಮೊಬೈಲ್ ಆ್ಯಪ್ ಸಿದ್ಧಪಡಿಸುತ್ತಿದ್ದು, ಅದು ತಯಾರಿ ಹಂತದಲ್ಲಿದೆ. ಮುಂದಿನ 10-15 ದಿನಗಳಲ್ಲಿ ತಯಾರಾಗುತ್ತಿದ್ದು ಬಾಡಿಗೆ ಮನೆಯವರು, ಸ್ವಂತ ಮನೆಯವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ….
1.ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಗೃಹಜ್ಯೋತಿ ಹೆಸರಿನ ಆ್ಯಪ್ ಮೂಲಕ ಜೂನ್ 15 ರಿಂದ ಅರ್ಜಿ ಸಲ್ಲಿಕೆ ಆರಂಭ. ಎಲ್ಲಾ ಆ್ಯಪ್ ನಂತೆ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುತ್ತದೆ.
2.ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸುವುದು,
3. ಬಾಡಿಗೆದಾರರು ಕನಿಷ್ಠ ಮೂರು ದಾಖಲೆಗಳನ್ನು ನೀಡಬೇಕು
4. ಆಧಾರ್ ಕಾರ್ಡು, ಬಾಡಿಗೆ ಕರಾರು ಪತ್ರ ಹಾಗೂ ಪ್ರತಿ ತಿಂಗಳು ಕಟ್ಟುವ ವಿದ್ಯುತ್ ಸ್ಥಾವರದ ಐಡಿ ನಂಬರ್ ಇರುವ ಬಿಲ್
5. ಆ್ಯಪ್ ನಲ್ಲಿ ಲಾಗಿನ್ ಆಗಿ Opt in ಆಪ್ಷನ್ ಪ್ರೆಸ್ ಮಾಡಬೇಕು
6. ಬಳಿಕ ಅಲ್ಲಿ ನಿಮ್ಮ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು.
7. ಒಂದು ವೇಳೆ ಒಂದೆರಡು ತಿಂಗಳಲ್ಲಿ ಬಾಡಿಗೆ ಮನೆ ಖಾಲಿ ಮಾಡಿ ಬೇರೆ ಮನೆಗೆ ಹೋದರೆ Opt out ಮಾಡಬೇಕು
8. ಮತ್ತೆ ಹೊಸ ಬಾಡಿಗೆ ಮನೆಗೆ ಹೋದಾಗ ಅಲ್ಲಿ ಮತ್ತೆ ಆ್ಯಪ್ ನಲ್ಲಿ ಲಾಗಿನ್ ಆಗಿ Opt ಇನ್ ಆಪ್ಷನ್ ಆಯ್ಕೆ ಮಾಡಬೇಕು
9. ಅಲ್ಲಿ ಮತ್ತೆ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ ಯೋಜನೆಗೆ ಅರ್ಹತೆ ಪಡೆಯಬೇಕು
10. ನೀವು ಬಳಸುತ್ತಿರುವ ಮನೆಗೆ ನಿಗದಿಯಾಗಿರುವ ವಾರ್ಷಿಕ ಸರಾಸರಿ ವಿದ್ಯುತ್ ಬಳಕೆ 200 ಯೂನಿಟ್ ಗಿಂತ ಕಡಿಮೆ ಇದ್ದರೆ ಯೋಜನೆ ಲಾಭ ಸಿಗುತ್ತದೆ. 200 ಯೂನಿಟ್ ಗಿಂತ ಹೆಚ್ಚಿದ್ದರೆ ಸಿಗುವುದಿಲ್ಲ.