ಖಾಸಗಿ ಸ್ಲಿಪರ್ ಬಸ್ನಲ್ಲಿ ಜೋಡಿ ಆತ್ಮಹತ್ಯೆ ಯತ್ನ- ಯುವತಿ ಸಾವು
ಹಾವೇರಿ: ಬಸ್ನಲ್ಲಿ ವಿಷ ಕುಡಿದು ಪ್ರೇಮಿಗಳು ಮಲಗಿದ್ದು, ಯುವತಿ ಮೃತಪಟ್ಟ ಘಟನೆ ರಾಣೆಬೆನ್ನೂರು ನಗರದ ಚಳಗೇರಿ ಟೋಲ್ ಬಳಿ ಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಬಳಿ ನಡೆದಿದೆ.
ಹೇಮಾ ರಾಮಕೃಷ್ಣಪ್ಪ (20) ಮೃತಪಟ್ಟ ಯುವತಿ. ಗಂಭೀರ ಸ್ಥಿತಿಯಲ್ಲಿದ್ದ ಯುವಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ ಎಂದು ತಿಳಿದುಬಂದಿದೆ.
ಬಿ.ಕಾಂ ಫೈನಲ್ ಇಯರ್ ವಿದ್ಯಾರ್ಥಿನಿಯಾಗಿದ್ದ ಬೆಂಗಳೂರು ಮೂಲದ ಹೇಮಾಳಿಗೆ ಬಾಗಲಕೋಟೆ ಮೂಲದ ಅಖಿಲ್ ಜೊತೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಪೋಷಕರು ಒಪ್ಪಿಗೆ ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಜೋಡಿ ಈ ತೀರ್ಮಾನಕ್ಕೆ ಬಂದಿದೆ.
ಸಾಯೋದಕ್ಕೂ ಮುನ್ನ ನಮಗೆ ಮದುವೆಗೆ ನೀವು ಒಪ್ಪಿಗೆ ಕೊಡಲ್ಲ ಅನ್ನೋದು ಗೊತ್ತಾಯ್ತು. ಹೀಗಾಗಿ ಬಾಂಬೆಗೆ ಹೋಗ್ತಾ ಇದ್ದೇವೆ ಎಂದು ಯುವತಿ ಫೋನ್ ಮಾಡಿ ಹೇಳಿದ್ದಳು. ಬಳಿಕ ಊಟಕ್ಕೆ ಬಸ್ ನಿಲ್ಲಿಸಿದಾಗ ಬಸ್ ನವರಿಗೆ ಅನುಮಾನ ಬಂದಿದೆ. ವಿಷದ ವಾಸನೆ ಬಂದ ಹಿನ್ನೆಲೆ ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸೋ ಪ್ರಯತ್ನ ಮಾಡಿದ್ದಾರೆ. ಆದರೆ ಹುಡುಗಿ ಬದುಕಲಿಲ್ಲ. ಹುಡುಗ ಹುಷಾರಾಗಿದ್ದಾನೆ ಎಂದು ವರದಿಯಾಗಿದೆ.
ಇನ್ನು, ಈ ಸಂಬಂಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.