5 ಗ್ಯಾರಂಟಿ ಜಾರಿ ಬಳಿಕ ಆತಂಕಗೊಂಡ ಬಿಜೆಪಿ ಜನರಲ್ಲಿ ಗೊಂದಲ ಮೂಡಿಸುತ್ತಿದೆ- ವೆರೋನಿಕಾ

ಉಡುಪಿ: ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಭರವಸೆಗಳನ್ನು ಜಾರಿಗೆಗೊಳಿಸಿದ ಬಳಿಕ ಸಂಪೂರ್ಣವಾಗಿ ಆತಂಕಗೊಂಡಿರುವ ಬಿಜೆಪಿ, ಪ್ರತಿಭಟನೆಯ ನೆಪದಲ್ಲಿ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ. ಇವರ ಇಂತಹ ಬೇಜವಾಬ್ದಾರಿ ವರ್ತನೆಗೆ ಜನರೇ ದಂಗೆ ಏಳಲಿದ್ದಾರೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ತನ್ನ ಅಧಿಕಾರದ ಅವಧಿಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದೆ ಕೇವಲ ಬಿಜೆಪಿ ಶಾಸಕರು ಮಂತ್ರಿಗಳು 40% ಕಮೀಷನ್ ಆಸೆಗೆ ಬಿದ್ದು ಜನರಿಂದ ತಿರಸ್ಕಾರವಾಗಿದ್ದು, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ 5 ಗ್ಯಾರಂಟಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು ಇದರ ಜಾರಿ ಪ್ರಕ್ರಿಯೆ ಕೂಡ ಆರಂಭವಾಗಿದೆ.

9 ವರ್ಷಗಳ ಹಿಂದೆ ಅಧಿಕಾರಕ್ಕೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿನ ಕಪ್ಪು ಹಣ ಭಾರತಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕಲಾಗುತ್ತದೆ ಎಂದು ಹೇಳಿ ಇಂದಿಗೂ ಕೂಡ ನಯಾಪೈಸೆ ಕಪ್ಪು ಹಣ ತರಲು ಸಾಧ್ಯವಾಗದವರು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಕುರಿತು ಮಾತನಾಡಲು ಯಾವ ನೈತಿಕತೆಹೊಂದಿದ್ದಾರೆ.

ಕರಾವಳಿಯ ಮಾಜಿ ಸಚಿವರೊಬ್ಬರು ಕರಾವಳಿ ಜಿಲ್ಲೆಗಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ನೀಡುವುದಾಗಿ ಭಾರಿ ಪ್ರಚಾರ ಪಡೆದಿದ್ದು ಬಿಟ್ಟರೆ ಇಂದಿಗೂ ಅದನ್ನು ಜಾರಿ ಮಾಡದೆ ಈಗ ಸಬೂಬು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ, ನೀಡಿದ ಭರವಸೆಯಂತೆ, ಇಂದು ನುಡಿದಂತೆ ನಡೆದಿದೆ.
ಮಾಜಿ ಸಚಿವರೋಬ್ಬರು ಖಾಸಗಿ ಬಸ್ಸುಗಳಿಗೆ ಉಚಿತ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಇವರ ಸರಕಾರ ಇದ್ದಾಗ ಈ ಬಗ್ಗೆ ಯಾಕೆ ಚಿಂತಿಸಿಲ್ಲ, ಯಾಕೆ ಉಡುಪಿ ಜಿಲ್ಲೆಯಲ್ಲಿನ ಸರಕಾರಿ ಬಸ್ಸುಗಳನ್ನು ಹಿಂದೆ ಕಳುಹಿಸಿದರು? ಬರೀ ಹೇಳಿಕೆಗಳನ್ನು ಕೊಡುವುದು ಬಿಟ್ಟು ಈಗಲಾದರೂ ಜಿಲ್ಲೆಯ ಎಲ್ಲಾ 5 ಶಾಸಕರು ಜೊತೆ ಸೇರಿ ಉಡುಪಿ ಜಿಲ್ಲೆಗೆ ಸರಕಾರಿ ಬಸ್ಸುಗಳನ್ನು ತರಲು ಶ್ರಮವಹಿಸಲಿ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕೇವಲ ಒಂದು ಜಾತಿ ಧರ್ಮ, ಪಕ್ಷಕ್ಕೆ ಸೀಮಿತವಾಗಿ ಯೋಜನೆಗಳನ್ನು ಅನುಷ್ಠಾನ ಮಾಡದೆ ಪ್ರತಿಯೊಬ್ಬರಿಗೂ ಲಭಿಸುವತ್ತಕಾರ್ಯೊನ್ಮುಖವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಬೆಂಬಲದಿಂದ ಭ್ರಮನಿರಸನ ವಾಗಿರುವ ಬಿಜೆಪಿಗರು ಪ್ರತಿಭಟನೆ ಮಾಡುವ ಮೂಲಕ ಜನರಲ್ಲಿ ಗೊಂದಲ ಎಬ್ಬಿಸುವುದು ಬಿಟ್ಟರೆ ಮುಂದಿನ ಐದು ವರ್ಷ ನಿರುದ್ಯೋಗಿಗಳಾಗಿ ಇರಬೇಕಿದೆ ಎನ್ನುವುದು ನೆನಪಿನಲ್ಲಿಡಬೇಕು.

ಅವರದೇ ಡಬ್ಬಲ್ ಎಂಜಿನ್ ಸರಕಾರ ಇದ್ದಾಗ ವಿದ್ಯುತ್, ಪೆಟ್ರೊಲ್, ಡೀಸೆಲ್, ಗ್ಯಾಸ್, ಇತರ ದಿನಬಳಕೆಯ ಸಾಮಗ್ರಿ ಬೆಲೆ ದಿನದಿಂದ ದಿನ ಗಗನಕ್ಕೆ ಏರುತ್ತಿದ್ದಾಗ ಜಾಣ ಮೌನ ವಹಿಸಿದ ಇವರು ಇವತ್ತು ನೀರಿನಿಂದ ಹೊರತೆಗೆದ ಮೀನಿನಂತೆ ಚಡಪಡಿಸುತ್ತಿದ್ದಾರೆ ಯಾಕೆ? ಆಗ ಯಾಕೆ ಪ್ರತಿಭಟನೆಯ ನೆನಪು ಬಂದಿಲ್ಲ. ಸ್ವಲ್ಪ ತಾಳ್ಮೆ ವಹಿಸಿ ಯೋಜನೆಗಳನ್ನು ಅರ್ಹರಿಗೆ ಸಿಗಲು ಸಹಕರಿಸಿ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೂಡ ಜನರು ಬಿಜೆಪಿಗರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!