ಉಡುಪಿ: ಬೋರ್ಡ್‌ಗಳ ಹಾವಳಿ- ಜೀವ‌ ಕೈಯಲ್ಲಿ ಹಿಡಿದು ಸಂಚರಿಸುವ ಪಾದಚಾರಿಗಳು

ಉಡುಪಿ: ಜೂ.6(ಉಡುಪಿ ಟೈಮ್ಸ್ ವರದಿ) ನಗರದಲ್ಲಿ ಫುಟ್‌ಪಾತ್ ಹಾಗೂ ರಸ್ತೆಯಲ್ಲೇ ಅಳವಡಿಸಿದ ಅಂಗಡಿಗಳ ಬೋರ್ಡ್ ಪಾದಚಾರಿಗಳು ನಡುರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ನಗರದ ಕ್ಲಾಕ್ ಟವರ್, ಸರ್ವಿಸ್ ಬಸ್ ನಿಲ್ದಾಣದಿಂದ ಸಿಟಿ ಬಸ್ ನಿಲ್ದಾಣ ರಸ್ತೆ, ಮಸೀದಿ ರಸ್ತೆ ಸಹಿತ ಹಲವು ಕಡೆ ಪಾದಚಾರಿಗಳು ಹೋಗುವ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಳಿಗೆಗಳ ಬೃಹತ್ ಗಾತ್ರದ ಬೋರ್ಡ್‌ಗಳಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆದಾಡುವ ಪರಿಸ್ಥಿತಿ ಉಂಟಾಗಿದೆ.

ಸರ್ವಿಸ್ ಬಸ್ ನಿಲ್ದಾಣದ ಮೈತ್ರಿ ಕಾಂಪ್ಲೆಕ್ಸ್ ಬಳಿಯ ನಗರ ಸಭಾ ಕಟ್ಟಡದ ಪ್ರಮುಖ ಅಂಗಡಿಗಳ ಬೋರ್ಡ್ ರಸ್ತೆಯಲ್ಲೇ ಅಳವಡಿಸಿದ್ದಾರೆ. ಪ್ರತಿ ನಿತ್ಯ ಜನನಿಬಿಡ ಪ್ರದೇಶವಾದ ಇಲ್ಲಿ ರಸ್ತೆಯ ಒಂದು ಪಾರ್ಶ್ವ ಹೋಟೆಲ್, ಸಲೂನ್, ಬಸ್ ಟಿಕೆಟ್ ಬುಕ್ಕಿಂಗ್ ಅಂಗಡಿಗಳ ಬೋರ್ಡ್ ರಸ್ತೆಯನ್ನು ಕಬಳಿಸಿದೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಈಗಾಗಲೇ ಹಲವು ಸಣ್ಣಪುಟ್ಟ ಅಪಘಾತ ಈ ಭಾಗದಲ್ಲಿ ಆಗಿದೆ ಎನ್ನುತ್ತಾರೆ ಹಲವರು.

ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಅವರು ಈ ಅವ್ಯವಸ್ಥೆ ಬಗ್ಗೆ ಸ್ವತಃ ಅವರೇ ರೋಡಿಗಿಳಿದು ನಗರದಲ್ಲಿ ಅತೀ ಕ್ರಮಸಿಕೊಂಡ, ಪಾರ್ಕಿಂಗ್ ಇಲ್ಲದ ಕಟ್ಟಡಗಳಿಗೆ ನೋಟೀಸ್ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.

ಆ ಬಳಿಕ ಜಿಲ್ಲೆಗೆ ಅಂತಹ ಖಡಕ್ ಅಧಿಕಾರಿಗಳು ಜಿಲ್ಲೆಗೆ ಬಾರದೇ ಇರುವುದೇ ಇಂತಹ ಅವ್ಯವಸ್ಥೆ ನಗರದಲ್ಲಿ  ಕಾಣಲು ಸಾಧ್ಯವಾಗುತ್ತದೆ ಎನ್ನುತ್ತಾರೆ ನಾಗರೀಕರು.

ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ನಗರ ಸಭಾ ಅಧಿಕಾರಿಗಳು ದಿನ‌ ನಿತ್ಯ ಈ ಭಾಗದಲ್ಲಿ ‌ಸಂಚರಿಸುತ್ತಾ ಇದ್ದರೂ ನಮಗೂ ಇದಕ್ಕೂ ಯಾವುದೇ ಸಮ್ಮಂದವಿಲ್ಲ ಎನ್ನುವಂತಿದ್ದರೇ, ಸಂಚಾರಿ ಪೊಲೀಸರು ನೋಡಿಯು ನೋಡದಂತೆ ಇರುವುದೇ ಆಶ್ಚರ್ಯವಾಗಿದೆ.

ಈ ಬೋರ್ಡ್‌ಗಳಿಂದ ಯಾವುದೇ ಅವಘಡ ಆಗುವ ಮುನ್ನ ನಗರ ಸಭಾ ಅಧಿಕಾರಿಗಳು, ಸಂಚಾರಿ ಪೊಲೀಸರು ಕ್ರಮಕೈಗೊಳ್ಳುವರೇ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!