‘ಗೃಹ ಜ್ಯೋತಿ’ ಯೋಜನೆಯ ಮಾರ್ಗಸೂಚಿಗಳು ಮಾಹಿತಿ ಇಲ್ಲಿದೆ….

ಬೆಂಗಳೂರು: (ಉಡುಪಿ ಟೈಮ್ಸ್ ವರದಿ) ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹ ಜ್ಯೋತಿ’ ಯೋಜನೆಯ ಮಾರ್ಗಸೂಚಿಗಳನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಈ ಯೋಜನೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೊಸ ನಿಬಂಧನೆ ಹಾಕಿದ್ದು, ಯೋಜನೆಯ ಲಾಭ ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಅಲ್ಲದೇ ಗೃಹ ವಿದ್ಯುತ್ ಬಳಕೆದಾರರಲ್ಲಿ ಒಂದಕ್ಕಿಂತ ಹೆಚ್ಚಿನ ಮೀಟರ್ ಇದ್ದಲ್ಲಿ ಒಂದು ಮೀಟರ್ ಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಈ ಮೂಲಕ ಬಾಡಿಗೆ ಮನೆಯವರಿಗೆ ಶಾಕ್ ನೀಡಲಾಗಿದೆ. ಇದರಿಂದಾಗಿ 200 ಯೂನಿಟ್ ವಿದ್ಯುತ್ ಬಳಸಬಹುದು ಎಂದುಕೊಂಡಿದ್ದ ಬಾಡಿಗೆದಾರರು ಯೋಜನೆಯಿಂದ ವಂಚಿತರಾಗುವ ಸಾಧ್ಯತೆಯಿದೆ.

ಸರ್ಕಾರ ನೀಡಿರುವ ಆದೇಶದ ಪ್ರಕಾರ ಕಳೆದ 12 ತಿಂಗಳಿನಲ್ಲಿ ಬಳಸಿದ ಯೂನಿಟ್‌ಗಳ ಆಧಾರದ ಮೇಲೆ ಶೇ.10 ರಷ್ಟು ಹೆಚ್ಚುವರಿ ಬಳಕೆ ಮಾಡಲು ಅನುಮತಿ ನೀಡಿದೆ. ಇದು ಸಂಪೂರ್ಣ ಉಚಿತವಾಗಿರಲಿದೆ. ಒಂದು ವೇಳೆ 200 ಯೂನಿಟ್‌ಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗುತ್ತದೆ.

ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗಲಿದ್ದು. ವಾಣಿಜ್ಯ ಉದ್ದೇಶಕ್ಕೆ ಬಳಸುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.

*  ಪ್ರತಿ ತಿಂಗಳು ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದು ಮಾಡಲಾಗುತ್ತದೆ.
*  ಒಂದು ವೇಳೆ ಸರಾಸರಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ, ಅರ್ಹ ಮೊತ್ತವನ್ನು ಬಿಲ್‌ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ ನೆಟ್‌ಬಿಲ್ ಆಗಿ ನೀಡಲಾಗುತ್ತದೆ. ಈ ಮೊತ್ತವನ್ನು ಗ್ರಾಹಕರು ಪಾವತಿ ಮಾಡಬೇಕಾಗುತ್ತದೆ. 
* ಅರ್ಹ ಯುನಿಟ್‌ ಮೊತ್ತಕ್ಕಿಂತ ಕಡಿಮೆ ಬಳಕೆ ಮಾಡಿದ್ದರೆ ಅಂತಹ ಗ್ರಾಹಕರಿಗೆ ಸೊನ್ನೆ ಬಿಲ್ ನೀಡಲಾಗುತ್ತದೆ. 
*  ಈ ಯೋಜನೆಯಡಿ ಸೌಲಭ್ಯ ಪಡೆಯಲು ಬಯಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
* ಪ್ರತಿ ಫಲಾನುಭವಿ ತನ್ನ ಗ್ರಾಹಕ ಐಡಿ/ ಖಾತೆ ಐಡಿಯನ್ನು ಆಧಾರ್ ಜೊತೆ ಜೋಡಣೆ ಮಾಡಬೇಕಾಗುತ್ತದೆ.
* ಸದ್ಯ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿ ಗ್ರಾಹಕರುಗಳನ್ನು ಗೃಹಜ್ಯೋತಿ ಯೋಜನೆ ಅಡಿಯಲ್ಲಿಸೇರಿಸಲಾಗುತ್ತದೆ. 

* ಜೂನ್ 30ರವರೆಗೆ ಬಳಸಿದ ವಿದ್ಯುತ್‌ಗೆ ಬಿಲ್‌ ಪಾವತಿ ಮಾಡಬೇಕಾಗುತ್ತದೆ. ಬಾಕಿ ಇರುವ ವಿದ್ಯುತ್ ಮೊತ್ತವನ್ನು ಮೂರು ತಿಂಗಳೊಳಗೆ ಪಾವತಿ ಮಾಡದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಗೊಳಿಸಲಾಗುತ್ತದೆ. 

* ಗೃಹ ವಿದ್ಯುತ್ ಬಳಕೆದಾರರಲ್ಲಿ ಒಂದಕ್ಕಿಂತ ಹೆಚ್ಚಿನ ಮೀಟರ್ ಇದ್ದಲ್ಲಿ ಒಂದು ಮೀಟರ್ ಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಗ್ರಾಹಕರಿಗೆ ನೀಡಿದ ಉಚಿತ ಮೊತ್ತವನ್ನು ಸರ್ಕಾರದಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಹಾಯಧನದ ಮೂಲಕ ಪಾವತಿ ಮಾಡಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!