ಸೂಲಿಬೆಲೆಗೆ ಜೈಲು ಕಂಬಿ ಎಣಿಸುವಂತೆ ಮಾಡುತ್ತೇವೆ- ಎಂ.ಬಿ ಪಾಟೀಲ್ ಎಚ್ಚರಿಕೆ
ವಿಜಯಪುರ: ‘ಚಕ್ರವರ್ತಿ ಸೂಲಿಬೆಲೆ ಮತ್ತು ಸಂಘ ಪರಿವಾರದವರು ಕಳೆದ ನಾಲ್ಕು ವರ್ಷ ಹಿಜಾಬ್, ಹಲಾಲ್, ಆಜಾನ್ ಸೇರಿದಂತೆ ಪಠ್ಯಪುಸ್ತಕದಲ್ಲಿ ಮಾಡಿರುವ ಅನಾಹುತವನ್ನು ಸರಿಪಡಿಸುವ ಕೆಲಸ ಕಾಂಗ್ರೆಸ್ ಮಾಡಲಿದೆ. ರಾಜ್ಯದಲ್ಲಿ ಕೋಮು ಸೌಹಾರ್ದ ಕದಡುವ ಕೆಲಸ ಮುಂದುವರಿಸಿದರೆ ಸೂಲಿಬೆಲೆಗೆ ಜೈಲು ಕಂಬಿ ಎಣಿಸುವಂತೆ ಮಾಡುತ್ತೇವೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಜನರ ಭಾವನೆ ಕೆರಳಿಸುವ ಪ್ರಯತ್ನ ನಡೆಯಿತೇ ಹೊರತು, ಜನರ ಬದುಕು ಕಟ್ಟಿಕೊಡುವ ಕೆಲಸ ಆಗಲಿಲ್ಲ. ಅಭಿವೃದ್ಧಿ ಕಾರ್ಯವನ್ನು ಸಂಪೂರ್ಣ ಕಡೆಗಣಿಸಲಾಗಿತ್ತು’ ಎಂದು ಆರೋಪಿಸಿದರು.
‘ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡಲಿದೆ. ರಾಜಕೀಯ ಲಾಭಕ್ಕೆ ದ್ವೇಷ ಬಿತ್ತುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.