ಉಡುಪಿ ಮಿಷನ್ ಆಸ್ಪತ್ರೆ: ಲೇಸರ್-ಲ್ಯಾಪರೊಸ್ಕೋಪಿಕ್ ಸರ್ಜರಿ ಸೆಂಟರ್ ಉದ್ಘಾಟನೆ
ಉಡುಪಿ, ಜೂ.3: ಉಡುಪಿ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ ತನ್ನ ಶತಮಾನೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ ನೂತನವಾಗಿ ಆರಂಭಿಸ ಲಾದ ಅಡ್ವನ್ಸೆಡ್ ಲೇಸರ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜರಿ ಕೇಂದ್ರವನ್ನು ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ರೈಟ್ ರೆವೆರೆಂಡ್ ಹೇಮಚಂದ್ರ ಕುಮಾರ್ ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, “ಮಿಷನರಿಗಳ ಸೇವೆ ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಕೆಲಸ ಕಾರ್ಯಗಳಿಂದ ದೇಶದ ಚಿತ್ರಣವೇ ಬದಲಾಗಿದೆ. ನಿರುದ್ಯೋಗಗಳಿಗೆ ಉದ್ಯೋಗ, ನಿರಾಶ್ರಿತರಿಗೆ ಆಶ್ರಯ, ಅನಾರೋಗ್ಯ ಪೀಡತರಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಅನಕ್ಷರಸ್ಥರಿಗೆ ಅಕ್ಷರ ಜ್ಞಾನವನ್ನು ನೀಡಲಾಗಿದೆ ಎಂದರು.
ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, ಆಸ್ಪತ್ರೆಯ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಈ ಕೇಂದ್ರವನ್ನು ಸ್ಥಾಪಿಸಬೇಕೆಂಬ ನಮ್ಮ ಕನಸನ್ನು ದೇವರು ನನಸು ಮಾಡಿದ್ದಾರೆ. ಇದು ಇಂದಿನ ಅಗತ್ಯತೆ ಕೂಡ ಆಗಿದೆ. ಇದಲ್ಲದೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಜನರು ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಅದನ್ನು ಈಡೇರಿಸಬೇಕಾಗಿದೆ ಎಂದು ತಿಳಿಸಿದರು.
ಆಸ್ಪತ್ರೆ ಆಡಳಿತ ಮಂಡಳಿ ಸದಸ್ಯ ಸ್ಟಿಫನ್ ಕರ್ಕಡ, ಲ್ಯಾಪರೊಸ್ಕೋಪಿ ಲೇಸರ್ ಸರ್ಜನ್ ಡಾ.ಕೀರ್ತನ್ ಕುಮಾರ್ ಉಪಾಧ್ಯ, ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್ ಉಪಸ್ಥಿತರಿದ್ದರು.
ರೆ.ಬುಕಾರ್ಡ್ ಬರ್ಟಿ ಅಮ್ಮನ್ನ ಹಾಗೂ ರೆ.ಐವನ್ ಡಿ.ಸೋನ್ಸ್ ಪ್ರಾರ್ಥನೆ ನೆರವೇರಿಸಿದರು. ಆಸ್ಪತ್ರೆಯ ಪಿಆರ್ಓ ರೋಹಿ ರತ್ನಾಕರ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.