ಕಡಿಮೆ ಅವಧಿಯಲ್ಲಿ ಗ್ಯಾರೆಂಟಿಗಳನ್ನು ಖಚಿತಗೊಳಿಸಿದ ಸರಕಾರ- ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಹರ್ಷ

ಉಡುಪಿ: ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕರ್ನಾಟಕದ ಜನತೆಗೆ ನೀಡಿರುವ ಪಂಚ ಗ್ಯಾರಂಟಿಗಳನ್ನು ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿನ ಕಾಂಗ್ರೆಸ್ ಸರಕಾರವು ಬಹಳಷ್ಟು ಕಡಿಮೆ ಅವಧಿಯಲ್ಲಿಯೇ ಖಚಿತಗೊಳಿಸಿರುವುದು ಅತೀವ ಸಂತಸ ತಂದಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಹರ್ಷ ವ್ಯಕ್ತಪಡಿಸಿದೆ.

ಚುನಾವಣೆಗೆ ಮೊದಲು ಈ ಪಂಚ ಗ್ಯಾರಂಟಿಗಳ ವಿಚಾರವನ್ನು ಜನತೆಗೆ ತಲುಪಿಸುವ ಸಮಯದಲ್ಲಿ ಬಿಜೆಪಿಯವರು “ಇದೆಲ್ಲಾ ಸುಳ್ಳು, ಕಾಂಗ್ರೆಸ್ ನವರ ಮಾತುಗಳನ್ನು ನಂಬಬೇಡಿ ಎಂದು ಜನರ ನಡುವೆ ಅಪಪ್ರಚಾರ ಮಾಡುತ್ತಿದ್ದರು. ಆದರೆ ಕರ್ನಾಟಕದ ಜನತೆ ಅವರ ಅಪಪ್ರಚಾರಗಳಿಗೆ ಕಿವಿಗೊಡದೆ ಕಾಂಗ್ರೆಸ್ ಪಕ್ಷದ ಹಾಗೂ ಅದರ ಭರವಸೆಗಳ ಬಗ್ಗೆ ನಂಬಿಕೆ ಇಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದರು.

ಹೀಗಿರುವಾಗ ಅವರು ನಂಬಿಕೆಗೆ ಸರಿಯಾಗಿ ನಾವು ನಡೆದುಕೊಳ್ಳಬೇಕಾದದ್ದು ಪಕ್ಷದ ಕರ್ತವ್ಯ. ಇದನ್ನು ಮನಗಂಡು ನಮ್ಮ ನಾಯಕರು ಯಾರೂ ನಿರೀಕ್ಷಿಸದಷ್ಟು ಶೀಘ್ರದಲ್ಲೇ ಈ ಗ್ಯಾರಂಟಿಗಳನ್ನು ಗ್ಯಾರಂಟಿ ಮಾಡಿ ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡು ಮತದಾರರ ಮನಗೆದ್ದಿದೆ. ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದ್ದಾರೆ.

ಚುನಾವಣೆಗೆ ಮೊದಲು ಗ್ಯಾರಂಟಿ ಕಾರ್ಡ್ ಬಗ್ಗೆ ಅಪಪ್ರಚಾರ‌ ಮಾಡುತ್ತಿದ್ದ ಬಿಜೆಪಿ, ಜೆಡಿಎಸ್ ನಾಯಕರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದು ಅಧಿಕಾರ ಸ್ವೀಕರಿಸಿದ ನಂತರ ಗ್ಯಾರಂಟಿ ಜಾರಿ ಮಾಡುವ ಬಗ್ಗೆ ತಗಾದೆ ಎಬ್ಬಿಸಿ ಮತದಾರರನ್ನು ಕೆರಳಿಸುವ ಕಾರ್ಯಕ್ಕೆ ಮುಂದಾಗಿದ್ದು, ಸರಕಾರವನ್ನು ಕಟಕಟೆಯಲ್ಲಿ ನಿಲ್ಲಿಸುವ ಮಟ್ಟಕ್ಕೆ ಇಳಿದಾಗ ಅವರೆಲ್ಲರಿಗೂ ಒಂದೇ ಉತ್ತರವೆಂಬಂತೆ ನೀಡಿರುವ ಐದೂ ಭರವಸೆಗಳನ್ನೂ ಈಡೇರಿಸುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಿದೆ.

ಇನ್ನು ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ಮತದಾರರ ಎದುರಿಗೆ ನಿಂತು ಹೆಮ್ಮೆಯಿಂದ ನಮ್ಮ ಸರಕಾರದ ಈ ಮಹೋನ್ನತ ಸಾಧನೆಯ ಕುರಿತು ಧೈರ್ಯದಿಂದ ಹೇಳಬಹುದು ಎಂದು ಗೀತಾ ವಾಗ್ಳೆ ಅವರು ಹೇಳಿದ್ದಾರೆ‌. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಒಂಭತ್ತು ವರ್ಷಗಳಾದರೂ ತಾವು ಕೊಟ್ಟಿರುವ ಯಾವುದೇ ಭರವಸೆಗಳನ್ನು ಬಿಜೆಪಿಯವರು ಈಡೇರಿಸಿಲ್ಲ.

ಆದಾಗ್ಯೂ ಮೊನ್ನೆ ಮೊನ್ನೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಡ್ ಜಾರಿ ಬಗ್ಗೆ ಕಾಲೆಳೆಯುವ ಪ್ರವೃತ್ತಿಯನ್ನು ತೋರಿಸಿ ಇದೀಗ ಜನರೆದುರು ಬೆತ್ತಲಾಗಿ ನಿಂತಿದೆ. ಬಿಜೆಪಿಯ ನಾಯಕರೇ, ನುಡಿದಂತೆ ನಡೆದ ಸರಕಾರ‌ ನಮ್ಮದು. ಬಿಜೆಪಿಯಂತೆ ಪೊಳ್ಳು ಭರವಸೆ ನೀಡುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ನ ಕೊಡುಗೆಗಳನ್ನು ಅನುಭವಿಸಿ ತೆಪ್ಪಗಿರಿ ಎಂದು ಗೀತಾ ವಾಗ್ಳೆ ಅವರು ಕುಟುಕಿದ್ದಾರೆ. ಅಲ್ಲದೇ ಪಂಚ ಗ್ಯಾರಂಟಗಳನ್ನು ಇಷ್ಟೊಂದು ಕನಿಷ್ಠ ಅವಧಿಯಲ್ಲಿ ಜಾರಿಗೆ ತಂದಿರುವುದಕ್ಕೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪರವಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಗೀತಾ ವಾಗ್ಳೆ ಹೇಳಿದರರು.

Leave a Reply

Your email address will not be published. Required fields are marked *

error: Content is protected !!