ಮಾತಿಗೆ ತಪ್ಪಿರುವ ಕಾಂಗ್ರೆಸ್- ಗ್ಯಾರೆಂಟಿಯಲ್ಲಿ ದೊಖಾ: ಬೊಮ್ಮಾಯಿ
ಕಾಂಗ್ರೆಸ್ ನಿಂದ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಉಚಿತ ಗ್ಯಾರೆಂಟಿ ಯೋಜನೆಗಳ ಜಾರಿಗೊಳಿಸುವ ವಿಚಾರದಲ್ಲಿ ಮಾತಿಗೆ ತಪ್ಪಿರುವ ಕಾಂಗ್ರೆಸ್ ನ ನಿಜ ಬಣ್ಣ ಬಯಲಾಗಿದ್ದು, ಗ್ಯಾರೆಂಟಿ ಯೋಜನೆ ಜಾರಿ ಮಾಡಲು ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಜನರಿಗೆ ಬಹಳಷ್ಟು ಭರವಸೆ ತೋರಿಸಿತ್ತು. ಆದರೆ, ಜನರ ನಿರೀಕ್ಷೆಗಳನ್ನು ದೊಡ್ಡ ಮಟ್ಟದಲ್ಲಿರಿಸಿಕೊಂಡು ಚುನಾವಣೆ ಗೆದ್ದ ಕಾಂಗ್ರೆಸ್ ಪಕ್ಷ, ಚುನಾವಣೆ ಪೂರ್ವ ಮಾತಿಗೂ ಚುನಾವಣೆ ನಂತರದ ಮಾತಿಗೂ ಬಹಳ ವ್ಯತ್ಯಾಸ ಇದೆ. ಎಲ್ಲರಿಗೂ 200 ಯುನಿಟ್ ವಿದ್ಯುತ್ ಫ್ರೀ ಅಂತ ಹೇಳಿದ್ದಾರೆ. ಗ್ಯಾರೆಂಟಿ ಕಾರ್ಡ್ ನಲ್ಲಿಯೂ ಅದೇ ರೀತಿ ಹೇಳಿದ್ದಾರೆ. ಒಂದು ಮನೆಯಲ್ಲಿ 70 ಯೂನಿಟ್ ಅಥವಾ 80 ಯೂನಿಟ್ ಬಳಕೆ ಮಾಡಬಹುದು. 200 ಯೂನಿಟ್ ಬಳಕೆ ಮಾಡಿದರೆ ಉಚಿತ ಕೊಡಬೇಕು. ಆದರೆ, ಇವತ್ತಿನ ಮುಖ್ಯಮಂತ್ರಿಗಳ ಮಾತಿನಲ್ಲಿ ವ್ಯತ್ಯಾಸ ಇದೆ ಎಂದರು.
ಈಗ ಸಿಎಂ ವಾರ್ಷಿಕ ಸರಾಸರಿ ಲೆಕ್ಕ ಹಾಕಿ ಉಚಿತ ಕೊಡುವುದಾಗಿ ಹೇಳುತ್ತಾರೆ. ಇದು ಇವರ ಹಿಡನ್ ಅಜೆಂಡಾ ಆಗಿದೆ. ಇದರಿಂದ ಸರಾಸರಿ 120 ರಿಂದ 125 ಯೂನಿಟ್ ವ್ಯತ್ಯಾಸವಾಗುತ್ತದೆ. ಸರಾಸರಿ ಬಳಕೆ ಲೆಕ್ಕ ಹಾಕುವುದು ಹಿಡನ್ ಅಜೆಂಡಾ. ಇವರು ಗ್ಯಾರೆಂಟಿಯಲ್ಲಿ ದೋಖಾ ಮಾಡುತ್ತಿದ್ದಾರೆ. ಅನ್ನಭಾಗ್ಯದಲ್ಲಿ ಹೆಚ್ಚುವರಿ ಐದು ಕೆ.ಜಿ ಮಾತ್ರ ಕೊಡುವುದು, ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆಯಡಿ 5 ಕೆ.ಜಿ ಅಕ್ಕಿ ಕೊಡುತ್ತಿದೆ. ನಮ್ಮ ರಾಜ್ಯದಲ್ಲಿ ಐದು ಕೆ.ಜಿ ಅಕ್ಕಿಯ ಜೊತೆಗೆ ಒಂದು ಕೆ.ಜಿ ರಾಗಿ ಒಂದು ಕೆ.ಜಿ ಜೋಳ ಕೊಡುತ್ತಿದ್ದೇವೆ. ಅದನ್ನು ಮುಂದುವರೆಸುತ್ತಾರೋ? ಇಲ್ಲವೋ ಸ್ಪಷ್ಟವಾಗಿಲ್ಲ ಎಂದರು.
ಗೃಹ ಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಧೋಖಾ ಇದೆ. ವಿಶೇಷವಾಗಿ ಬಡವರ ಮನೆಯಲ್ಲಿ ಹಿರಿಯ ಮಹಿಳೆಯರಿರುತ್ತಾರೆ. ಅವರಿಗೆ ಆನ್ ಲೈನ್ ಅರ್ಜಿ ಹಾಕಲು ಹೇಳಿ ಅವರಿಗೆ ಯೋಜನೆ ಲಾಭ ಸಿಗದಂತೆ ಮಾಡುವ ಹುನ್ನಾರ ಅಡಗಿದೆ.ಎಲ್ಲ ಪಂಚಾಯತಿಗಳಲ್ಲಿ ಪಿಡಿಒಗಳಿದ್ದಾರೆ. ಅವರ ಮೂಲಕ ಮಾಹಿತಿ ಸಂಗ್ರಹಿಸಿ ಕೊಡಬೇಕಿತ್ತು. ಅರ್ಜಿ ಹಾಕಲು ಒಂದು ತಿಂಗಳು, ಪ್ರಕ್ರಿಯೆ ಮಾಡಲು ಒಂದು ತಿಂಗಳು ಕಾಲ ಹರಣ ಮಾಡುವ ಲೆಕ್ಕ ಇದರಲ್ಲಿ ಅಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವೇ ಎಲ್ಲರ ಮನೆಗಳಿಗೆ ಹೋಗಿ ಮಾಹಿತಿ ಪಡೆದು ಯೋಜನೆ ಜಾರಿ ಮಾಡಬೇಕು. ಇನ್ನು ಎಸಿ ಬಸ್ಸು, ಲಗ್ಜುರಿ ಬಸ್ ಇಲ್ಲ ಅಂತ ಹೇಳಿದ್ದಾರೆ. ಕೆಂಪು ಬಸ್ ಮಾತ್ರ ಗ್ಯಾರೆಂಟಿ ಅಂತ ಆಯಿತು ಎಂದರು.
ಯುವ ನಿಧಿ ಯೋಜನೆಯನ್ನು 2022-23 ಪಾಸಾದ ಡಿಗ್ರಿ ಹೋಲ್ಡರ್ಸ್ ಗಳಿಗೆ ಕೊಡುವುದಾಗಿ ಹೇಳುತ್ತಾರೆ. ಡಿಗ್ರಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಹೀಗಾಗಿ ಹೆಚ್ಚಿನ ನಿರುದ್ಯೋಗಿಗಳಿಗೆ ಅನುಕೂಲ ಆಗುವುದಿಲ್ಲ. ಮತ್ತೆ ಈ ಯೋಜನೆಗಳ ಜಾರಿಗೆ ಎಷ್ಟು ಖರ್ಚಾಗುತ್ತದೆ ಎನ್ನುವುದನ್ನು ಹೇಳಿಲ್ಲ ಎಂದರು.
ಶಾಲಾ ಕಟ್ಟಡ ನಿರ್ಮಾಣ, ಆಸ್ಪತ್ರೆ ನಿರ್ಮಾಣ, ನೀರಾವರಿ ಯೋಜನೆಗಳನ್ನು ನಿಲ್ಲಿಸುತ್ತೀರಾ ? ಎಸ್ಸಿಪಿ ಟಿಎಸ್ ಪಿ ಯೋಜನೆ ಹಣ ಬಳಸುತ್ತೀರಾ ? ಕೇಂದ್ರದ ಅನುದಾನಕ್ಕೆ ರಾಜ್ಯದ ಪಾಲಿನ ಹಣ ನೀಡುವುದನ್ನು ನಿಲ್ಲಿಸುತ್ತೀರಾ ? ರಾಜ್ಯದ ಜನತೆಗೆ ಕೇಳುವ ಅಧಿಕಾರ ಇದೆ. ಒಂದು ಪಕ್ಷ ಅಧಿಕಾರ ನಡೆಸಿದರೆ ಅದನ್ನು ಕೇಳಲು ಉಳಿದ ಪಕ್ಷಗಳನ್ನು ಜನರು ಕೂಡಿಸಿರುತ್ತಾರೆ. ಸರ್ಕಾರ ಸ್ಪಷ್ಟತೆ ನೀಡಬೇಕು ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 6800 ಕೋಟಿ ಮೀಸಲಿಟ್ಟಿದ್ದೇವೆ. ಅದನ್ನು ಏನು ಮಾಡುತ್ತಾರೆ.
ಯಾವ ಯೋಜನೆಗಳನ್ನು ಸ್ಥಗಿತಗೊಳಿಸುತ್ತಾರೆ, ಎಲ್ಲಿಂದ ಹಣ ತರುತ್ತಾರೆ ಎನ್ನುವುದನ್ನು ತಿಳಿಸಿಲ್ಲ ಎಂದರು.
ಸರ್ಕಾರ ಹೆಚ್ಚಿನ ಆದಾಯ ತರದೇ ಇರುವ ಹಣವನ್ನೇ ಖರ್ಚು ಮಾಡಿದರೆ, ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ನಮ್ಮ ರಾಜ್ಯ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯವಾಗಿದೆ. ಈಗಿರುವ ಆರ್ಥಿಕ ಪರಿಸ್ಥಿತಿ ಸರಿಯಾಗಿ ನಿರ್ವಹಣೆ ಮಾಡದೇ ಹೋದರೆ, ಆರ್ಥಿಕ ಹೊರೆ ಬೀಳಲಿದೆ. ಇವರು ಯಾವ ರೀತಿಯ ಸಾಲ ಪಡೆಯುತ್ತಾರೆ ಎನ್ನುವುದು ಸ್ಪಷ್ಟವಾಗಬೇಕು. ಇವರು ತಾವು ಮಾಡುವ ಯೋಜನೆಗಳಿಂದ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ ಮಾಡಬಾರದು. ಅವರ ಮಾತು ಕೇಳಿದರೆ ಮಾತಿಗೆ ತಪ್ಪಿದ್ದಾರೆ. ಹೇಳುವುದೊಂದು ಮಾಡುವುದೊಂದು ಮಾಡಿದ್ದಾರೆ. ರಾಜ್ಯದ ಜನತೆ ಇದೆಲ್ಲವನ್ನು ಗಮನಿಸುತ್ತಿದ್ದಾರೆ. ರಾಜ್ಯದ ಜನರ ನಿರೀಕ್ಷೆಗಳು ಹುಸಿಯಾಗಿವೆ ಎಂದರು.
ಕಾಂಗ್ರೆಸ್ ನವರು ಉಚಿತವಾಗಿ ಕೊಡುವುದೇನು ಹೊಸದಲ್ಲ. ಈಗಾಗಲೇ ಉಚಿತ ಆಹಾರ ಧಾನ್ಯ, ವಿದ್ಯುತ್ ಸಬ್ಸಿಡಿ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳು ಸೇರಿದಂತೆ ಸುಮಾರು 35 ಸಾವಿರ ಕೋಟಿ ರೂ. ಸಬ್ಸಿಡಿ ನೀಡಲಾಗುತ್ತಿದೆ. ಸರ್ಕಾರಿ ನೌಕರರಿಗೆ ಶೇ 17% ರಷ್ಟು ವೇತನ ಹೆಚ್ಚಳ ಮಾಡಿರುವುದು ಜಾರಿಗೆ ಬಂದಿದೆ. ಅದನ್ನು ಮುಂದುವರೆಸಬೇಕು. ಈ ಯೋಜನೆಗಳ ಜಾರಿಯಿಂದ ಅಭಿವೃದ್ಧಿ ಗೆ ಹೊಡೆತ ಬೀಳಲಿದೆ. ಈ ಯೋಜನೆಗಳು ಎಷ್ಟು ದಿನ ಇರುತ್ತದೆ ಎನ್ನುವುದು ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ರಾಜಕೀಯ ಹಿತಾಸಕ್ತಿಯ ಮೇಲೆ ನಿಂತಿರುತ್ತದೆ ಎಂದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2014 ರಲ್ಲಿ ಚುನಾವಣೆ ಸಂದರ್ಭದಲ್ಲಿ ಮೋದಿಯವರು ವಿದೇಶಿ ಬ್ಯಾಂಕ್ ಗಳಲ್ಲಿ ಇದ್ದ ಬ್ಲಾಕ್ ಮನಿ ಭಾರತಕ್ಕೆ ತಂದರೆ ಅದು ಪ್ರತಿಯೊಬ್ಬರಿಗೆ 15 ಲಕ್ಷ ಹಾಕುವಷ್ಟು ಇದೆ ಅಂತ ಹೇಳಿದ್ದರು. ಅವರು ಎಲ್ಲರ ಅಕೌಂಟ್ ಗೆ ಹಾಕುತ್ತೇವೆ ಎಂದು ಹೇಳಿಲ್ಲ ಎಂದರು.
ಪ್ರತಿಪಕ್ಷ ನಾಯಕ ಸ್ಥಾನದ ಆಯ್ಕೆ ಗೊಂದಲ ಇಲ್ಲ
ಪ್ರತಿಪಕ್ಷದ ನಾಯಕನ ಸ್ಥಾನ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಮುಂದಿನ ಅಧಿವೇಶನ ಆರಂಭಕ್ಕೂ ಮುನ್ನ ಪ್ರತಿಪಕ್ಷದ ನಾಯಕನ ಆಯ್ಕೆಯಾಗುತ್ತದೆ. ಇದಕ್ಕಾಗಿ ಯಾವುದೇ ಸ್ಪರ್ಧೆ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಒಟ್ಟಾಗಿ ತೀರ್ಮಾನ ಮಾಡುತ್ತೇವೆ.
ಬಿಎಸ್‌ವೈ ಜೊತೆ ಪ್ರಸ್ತುತ ರಾಜಕೀಯದ ಬಗ್ಗೆ ಚರ್ಚೆ
ಯಡಿಯೂರಪ್ಪ ಅವರನ್ನು ವಯಕ್ತಿಕ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ತೆರಳಿದ್ದೆ. ಅದರ ಜೊತೆಗೆ ಪ್ರಸ್ತುತ ರಾಜಕೀಯ ವಿಷಯಗಳ ಕುರಿತು ಚರ್ಚೆ ಮಾಡಿದ್ದೇವೆ ಎಂದರು.