ಉಡುಪಿ: ಜೂ.3-4 ರಂಗಭೂಮಿ‌ ಆನಂದೋತ್ಸವ-2023

ಉಡುಪಿ: ರಂಗಭೂಮಿ ಉಡುಪಿ ಇದರ ಆಶ್ರಯದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ, ಕುತ್ಪಾಡಿ ಆನಂದ ಗಾಣಿಗರ ಕುಟುಂಬಸ್ಥರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ‌ ಸಹಯೋಗದೊಂದಿಗೆ ಇದೇ ಬರುವ ಜೂನ್ 3 ಮತ್ತು 4 ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿ. ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ‘ರಂಗಭೂಮಿ‌ ಆನಂದೋತ್ಸವ- 2023’ ಕಾರ್ಯಕ್ರಮ ನಡೆಯಲಿದೆ‌.

ಉಡುಪಿಯಲ್ಲಿಂದು‌ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಂಗಭೂಮಿ ಉಪಾಧ್ಯಕ್ಷ ಭಾಸ್ಕರ್ ರಾವ್ ಕಿದಿಯೂರು ಅವರು, ಜೂನ್ 3 ರಂದು ಸಂಜೆ 5.45ಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಅವರು ಆನಂದೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸಭಾಕಾರ್ಯಕ್ರಮದ ಬಳಿಕ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಕಲಾವಿದರಿಂದ ‘ಧ್ವಯ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಜೂನ್ 4ರಂದು ಸಂಜೆ 5.45ಕ್ಕೆ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ ಅವರಿಗೆ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆ ಬಳಿಕ ನಟನ ಮೈಸೂರು ತಂಡದಿಂದ ಕಣಿವೆಯ ಹಾಡು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಂಗಭೂಮಿಯ‌ ಉಪಾಧ್ಯಕ್ಷ ಎನ್. ರಾಜಗೋಪಾಲ ಬಲ್ಲಾಳ್, ಕೋಶಾಧಿಕಾರಿ ಭೋಜ ಯು, ಸದಸ್ಯ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!