ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ ಬಿಸಾಡಲು ಹರಿದ್ವಾರ ತಲುಪಿದ ಕುಸ್ತಿಪಟುಗಳು
ಹರಿದ್ವಾರ: ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ಭೂಷಣ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಕುಸ್ತಿಪಟುಗಳು ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ ಬಿಸಾಡಲು ಹರಿದ್ವಾರ ತಲುಪಿದ್ದಾರೆ. ಒಲಿಂಪಿಕ್ ಪದಕ ವಿಜೇತರಾಗಿರುವ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಹಾಗೂ ಸಂಗೀತಾ ಫೋಗಟ್ ತಮ್ಮ ಮೆಡಲ್ಗಳನ್ನು ನದಿಗೆಸೆಯಲು ಸನ್ನದ್ಧರಾಗಿದ್ದಾರೆ.
ಭಾವುಕರಾಗಿರುವ ಕುಸ್ತಿಪಟುಗಳು ಅಳುತ್ತಿರುವ ದೃಶ್ಯಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ. ಹಲವಾರು ಮಂದಿ ಅವರನ್ನು ಸಮಾಧಾನಪಡಿಸುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿ ಒಂದು ತಿಂಗಳ ಕಾಲ ಪ್ರತಿಭಟನೆಯಲ್ಲಿ ತೊಡಗಿರುವ ಕುಸ್ತಿಪಟುಗಳು, ತಮ್ಮ ಪ್ರಶಸ್ತಿಗಳನ್ನು ಗಂಗಾ ನದಿಗೆ ಎಸೆಯಲು ಉದ್ದೇಶಿಸಿದ್ದಾರೆ.
ಕುಸ್ತಿಪಟುಗಳು ತಮ್ಮ ಪದಕಗಳನ್ನು ತ್ಯಜಿಸಲು ನಿರ್ಧರಿಸಿದ್ದು ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.