ನಮ್ಮನ್ನು ಟೀಕಿಸುವ ಮುನ್ನ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ನೇಮಿಸಲಿ: ಕಾಂಗ್ರೆಸ್ ಸವಾಲು

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಇದೇ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಪ್ರತಿಪಕ್ಷದ ನಾಯಕನ ಆಯ್ಕೆಗೆ ಕೇಸರಿ ಪಕ್ಷವು ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ ಎಂದು ತಿರುಗೇಟು ನೀಡಿದೆ.

ಪಕ್ಷದ ಅಧಿಕೃತ ಕರ್ನಾಟಕ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಕಾರವನ್ನು ಟೀಕಿಸುವ ಮೊದಲು ಮೊದಲು ವಿರೋಧ ಪಕ್ಷದ ನಾಯಕನನ್ನು ನೇಮಿಸುವಂತೆ ಬಿಜೆಪಿಗೆ ಸವಾಲೆಸೆದಿದೆ.

ನಾವು ಗೆದ್ದೂ ಆಯ್ತು, ಸಿಎಂ, ಡಿಸಿಎಂ ಆಯ್ಕೆಯೂ ಆಯ್ತು, ಸಚಿವ ಸಂಪುಟವೂ ರೆಡಿ ಆಯ್ತು, ಸರ್ಕಾರದ ರಚನೆಯೂ ಆಯ್ತು. ಇದುವರೆಗೂ ನಮ್ಮ ಸರ್ಕಾರವನ್ನು ಎದುರಿಸಲು ಬಿಜೆಪಿಗೆ ಸಮರ್ಥ ವಿರೋಧ ಪಕ್ಷದ ನಾಯಕ ಸಿಗದಿರುವುದು ದುರಂತ!. ನೈತಿಕತೆ ಇರದಿದ್ದರೇನಂತೆ, ಕನಿಷ್ಠ ವಿರೋಧ ಪಕ್ಷದ ನಾಯಕನನ್ನು ಮುಂದಿಟ್ಟುಕೊಂಡಾದರು ಬಿಜೆಪಿ ನಮ್ಮನ್ನು ವಿರೋಧಿಸಲಿ!’ ಎಂದು ಟೀಕಿಸಿದೆ.

ಕರ್ನಾಟಕದ ಜನತೆಗೆ ಭರವಸೆ ನೀಡಿದ್ದ 5 ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗಿದೆ ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿರುವಾಗಲೇ ಕಾಂಗ್ರೆಸ್ ಈ ಹೇಳಿಕೆ ನೀಡಿದೆ. ಆಶ್ವಾಸನೆಗಳನ್ನು ಆದಷ್ಟು ಬೇಗ ಜಾರಿಗೊಳಿಸುವಂತೆ ಪ್ರತಿಪಕ್ಷ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!