ಹೊಸ ಸಂಸತ್ ಭವನದ ಒಳಗೆ ಆರೋಪಿ ಬಿಜೆಪಿ ಸಂಸದ ಬ್ರಿಜ್‌ಭೂಷಣ್ -ಹೊರಗೆ ಕುಸ್ತಿಪಟುಗಳ ಪ್ರತಿಭಟನೆ- ಬಂಧನ
ನವದೆಹಲಿ: ಒಲಿಂಪಿಕ್ ಪದಕ ವಿಜೇತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಕ್ಷಿ ಮಲಿಕ್ ಅವರು ಭಾನುವಾರ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಇದು ‘ದುಃಖದ ದಿನ’ ಎಂದು ಹೇಳಿದ್ದಾರೆ.
“ಲೈಂಗಿಕ ದೌರ್ಜನ್ಯ ಎಸಗಿದ ಗೂಂಡಾ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರು ಇಂದು ಹೊಸ ಸಂಸತ್ತಿನಲ್ಲಿ ಕುಳಿತಿದ್ದಾರೆ. ಆದರೆ ನಮ್ಮನ್ನು ರಸ್ತೆಯಲ್ಲಿ ಎಳೆದೊಯ್ಯಲಾಗುತ್ತಿದೆ. ಭಾರತೀಯ ಕ್ರೀಡೆಗಳಿಗೆ ಇದು ಅತ್ಯಂತ ದುಃಖದ ದಿನ” ಎಂದು ಮಲಿಕ್ ತಿಳಿಸಿದ್ದಾರೆ.
ಬಿಜೆಪಿ ಸಂಸದ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬ್ರಿಜ್ ಭೂಷಣ್ ಅವರು ಹೊಸ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಬ್ರಿಜ್ ಭೂಷಣ್ ಅವರು ಸಂಸತ್ತಿನ ಸಭಾಂಗಣದ ಹಿಂದಿನ ಸಾಲಿನಲ್ಲಿ ಕುಳಿತಿದ್ದರು ಮತ್ತು ಸಮಾರಂಭದಲ್ಲಿ ಅವರು ಇತರ ನಾಯಕರನ್ನು ಸ್ವಾಗತಿಸುತ್ತಿದ್ದರು. ಆದರೆ ಇತರ ನಾಯಕರು ಅದನ್ನು ತಪ್ಪಿಸಿದರು ಎನ್ನಲಾಗಿದೆ.
ಬಲವಂತವಾಗಿ ಕುಸ್ತಿಪಟುಗಳ ಬಂಧನ
ಮಹಿಳಾ ‘ಮಹಾಪಂಚಾಯತ್’ ಗಾಗಿ ಹೊಸ ಸಂಸತ್ ಭವನದ ಕಡೆಗೆ ತೆರಳಲು ಪ್ರಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಭದ್ರತಾ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರನ್ನು ವಶಕ್ಕೆ ಪಡೆದು, ಬಸ್‌ಗಳಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಯಿತು.
ಒಲಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಸೇರಿದಂತೆ ಹಲವು ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಡಬ್ಲ್ಯುಎಫ್‌ಐ ಅಧ್ಯಕ್ಷರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.