ರಕ್ಷಣಾ ಇಲಾಖೆಯ ಮಹತ್ವದ ಮಾಹಿತಿಗಳನ್ನು ಚೀನಾಗೆ ರವಾನಿಸುತ್ತಿದ್ದ ಪತ್ರಕರ್ತನ ಬಂಧನ
ನವದೆಹಲಿ: ರಕ್ಷಣಾ ಇಲಾಖೆಯ ಮಹತ್ವದ ಮಾಹಿತಿಗಳನ್ನು ಚೀನಾಗೆ ರವಾನಿಸುತ್ತಿದ್ದ ಆರೋಪದ ಮೇರೆಗೆ ದೆಹಲಿ ಪೊಲೀಸರು ಸಂಜೀವ್ ಶರ್ಮಾ ಎಂಬ ಪತ್ರಕರ್ತನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ದೆಹಲಿ ವಿಶೇಷ ಸೆಲ್ ಡಿಸಿಪಿ ಸಂಜೀವ್ ಕುಮಾರ್ ಯಾದವ್ ಅವರು, 40 ವರ್ಷದ ರಾಜೀವ್ ಶರ್ಮಾ ಪಿತಂಪುರದ ನಿವಾಸಿಯಾಗಿದ್ದು, ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್ಐ), ದಿ ಟ್ರಿಬ್ಯೂನ್ ಮತ್ತು ಸಕಾಲ್ ಟೈಮ್ಸ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಇವರು ಇತ್ತೀಚೆಗೆ ಚೀನಾದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ಗೆ ಲೇಖನವೊಂದನ್ನು ಬರೆದಿದ್ದರು. ಅವರನ್ನು ಸೆ. 14ರಂದು ಅಧಿಕೃತ ಗೋಪ್ಯತಾ ಕಾಯ್ದೆ (ಒಎಸ್ಎ) ಅಡಿ ಬಂಧಿಸಲಾಗಿದೆ. ಅವರನ್ನು ಮರುದಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ನಂತರ ಆರು ದಿನಗಳ ಪೊಲೀಸ್ ವಶಕ್ಕೆ ಕರೆದೊಯ್ಯಲಾಗಿದೆ. ಅವರ ಬಳಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕೆಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ. ನಮಗೆ ಸಿಕ್ಕ ದಾಖಲೆಗಳ ಅನ್ವಯ ಸಂಜೀವ್ ಶರ್ಮಾ, ಚೀನಾದ ಓರ್ವ ಮಹಿಳೆ ಮತ್ತು ನೇಪಾಳದ ಓರ್ವ ವ್ಯಕ್ತಿಯೊಂದಿಗೆ ಇವರು ಸಂಪರ್ಕ ಹೊಂದಿದ್ದು, ಇವರ ಮೂಲಕ ಗೌಪ್ಯ ಮಾಹಿತಿಗಳನ್ನು ಚೀನಾಕ್ಕೆ ರವಾನಿಸುತ್ತಿದ್ದರು. ಇವರಿಗೆ ಸೇರಿದ ಸಂಸ್ಥೆಯೊಂದು ಮಹಿಪಾಲ್ ಪುರದಲ್ಲಿದ್ದು, ಈ ಸಂಸ್ಥೆಯ ಮೂಲಕವಾಗಿ ಚೀನಾಗಿ ಔಷಧಗಳನ್ನು ರವಾನಿಸಲಾಗುತ್ತಿತ್ತು. ಚೀನಾದಿಂದ ಬರುತ್ತಿದ್ದ ಹಣವನ್ನು ಇಲ್ಲಿನ ಏಜೆಂಟ್ ಗಳಿಗೆ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.
ತನಿಖೆಯಲ್ಲಿ ದೊರೆತ ಮಾಹಿತಿ ಅನ್ವಯ ಕಳೆದ 1 ವರ್ಷದ ಅವಧಿಯಲ್ಲಿ ಸುಮಾರು 40 ರಿಂದ 45 ಲಕ್ಷ ರೂಗಳ ವಹಿವಾಟು ನಡೆದಿದೆ. ಇನ್ನು ರಾಜೀವ್ ಕಿಷ್ಕಿಂದಾ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ರಾಜೀವ್ ಶರ್ಮಾಗೆ 11 ಸಾವಿರ ಚಂದಾದಾರರಿದ್ದಾರೆ. ಬಂಧನಕ್ಕೊಳಗಾದ ದಿನ ಅವರು ಎರಡು ವಿಡಿಯೋಗಳನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದರು. ಅವುಗಳಲ್ಲಿ ಎಂಟು ನಿಮಿಷದ ‘ಚೀನಾ ಮತ್ತೆ ತಂಟೆ ಮಾಡಬಹುದು’ ಎಂಬ ಶೀರ್ಷಿಕೆಯ ವಿಡಿಯೋದಲ್ಲಿ, ‘ಭಾರತ ಮತ್ತು ಚೀನಾ ವಿದೇಶಾಂಗ ಸಚಿವರ ನಡುವೆ ಒಪ್ಪಂದ ನಡೆದಿದ್ದರೂ ಶಾಂತಿಯ ಹಾದಿ ಈಗಲೂ ಕಠಿಣವಾಗಿದೆ. ಮಾಸ್ಕೋದಲ್ಲಿ ಇಬ್ಬರು ಸಚಿವರ ನಡುವೆ ನಡೆದ ಮಾತುಕತೆಯಂತೆಯೇ ಎಲ್ಲವೂ ನಡೆಯಲಿದೆ ಎನ್ನುವುದಕ್ಕೆ ಖಾತರಿ ಇಲ್ಲ ಎಂದು ಹೇಳಿದ್ದರು. ಅಲ್ಲದೆ ನಾಲ್ಕು ನಿಮಿಷಗಳ ಮತ್ತೊಂದು ಹಿಂದಿ ವಿಡಿಯೋದಲ್ಲಿ ‘ಭಾರತೀಯ ಮಾಧ್ಯಮಗಳ ಸ್ಥಿತಿ ಹೀನಾಯವಾಗಿದೆ. ಅದು ಕಾವಲುನಾಯಿಯಾಗಬೇಕಿತ್ತು. ಆದರೆ ಸರ್ಕಾರದ ಲ್ಯಾಪ್ಡಾಗ್ ಆಗಿದೆ’ ಎಂದು ಟೀಕಿಸಿದ್ದಾರೆ ಎಂದು ಸಂಜೀವ್ ಕುಮಾರ್ ಯಾದವ್ ತಿಳಿಸಿದ್ದಾರೆ.