ಮುಂದಿನ ಸಚಿವ ಸಂಪುಟದಲ್ಲಿ ಗ್ಯಾರಂಟಿ ಕುರಿತು ಸ್ಪಷ್ಟ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 200 ಯೂನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ ತಿಂಗಳಿಗೆ ರೂ. 2,000, ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ, ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ, ನಿರುದ್ಯೋಗಿ ಯುವಕರಿಗೆ ರೂ.1,500 ಭತ್ಯೆ ಗ್ಯಾರಂಟಿ ಯೋಜನೆಗಳಾಗಿವೆ.

ಜೂನ್ ನಲ್ಲಿ ಮುಂದಿನ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆಯಿದೆ. ಈ ಹಿಂದೆ ಅಧಿಕಾರಿದಲ್ಲಿದ್ದ ವಿಪಕ್ಷಗಳು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. 2013-18ರಲ್ಲಿ ನಾವು ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ಅದೇ ರೀತಿಯಲ್ಲಿ  ಈ ಬಾರಿಯೂ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲಾಗುವುದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಐದು ಭರವಸೆಗಳ ಅನುಷ್ಠಾನಕ್ಕೆ ಚರ್ಚಿಸಿ ಅನುಮೋದನೆ ನೀಡಲಾಗುವುದು  ಎಂದು ಭರವಸೆ ನೀಡಿದರು.

ಸಚಿವ ಸಂಪುಟ ಹೊಸ ಮತ್ತು ಹಳೆಯ ಮುಖಗಳ ಮಿಶ್ರಣವಾಗಿದೆ ಆದರೆ ಮೊದಲ ಬಾರಿಗೆ ಶಾಸಕರಾಗಿ ಗೆದ್ದ ಯಾರನ್ನೂ ಮಂತ್ರಿ ಮಾಡಲಾಗಿಲ್ಲ. ‘ಜನರು ಬದಲಾವಣೆ ಬಯಸಿರುವುದರಿಂದ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸಬೇಕು ಮತ್ತು ಆಡಳಿತಕ್ಕೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಈ ಸಚಿವ ಸಂಪುಟ ರಚನೆ ಮಾಡಲಾಗಿದೆ’ ಎಂದರು.

ಕೊಡಗು, ಹಾವೇರಿ, ಹಾಸನ, ಕೋಲಾರ, ಚಿಕ್ಕಮಗಳೂರು ಸೇರಿದಂತೆ ಇತರೆ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೇ ಇರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯರಿಲ್ಲ, ಬಹುತೇಕರು ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೊನೆ ಗಳಿಗೆಯಲ್ಲಿ ಸ್ಥಾನ ತಪ್ಪಿದ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಉಪಸಭಾಪತಿ ಸ್ಥಾನಕ್ಕೆ ಮನವೊಲಿಸಲಾಗಿದೆ ಎಂದು ತಿಳಿಸಿದರು. 

Leave a Reply

Your email address will not be published. Required fields are marked *

error: Content is protected !!