ಸಿದ್ದರಾಮಯ್ಯ ಸಂಪುಟ ಸಂಪೂರ್ಣ ಭರ್ತಿ: ಶೆಟ್ಟರ್,ಸವದಿಗಿಲ್ಲ‌ ಸ್ಥಾನ – ಯಾವ ಸಮುದಾಯಕ್ಕೆ ಸಚಿವಗಿರಿ?

ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಯಾರೆಲ್ಲಾ ಸೇರ್ಪಡೆಯಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದ್ದು, ಆರಂಭದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸಚಿವ ಸಂಪುಟ ಭರ್ತಿಯಾಗಲಿದೆ. ಇಂದು ಶನಿವಾರ ಬೆಳಗ್ಗೆ 11.45ಕ್ಕೆ 24 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ಲಿಂಗಾಯತ ಮತಬ್ಯಾಂಕ್ ಓಲೈಸಲು ಸಹಕರಿಸಿದ ಚುನಾವಣೆಗೆ ಸ್ವಲ್ಪ ದಿನ ಮೊದಲಷ್ಟೇ ಬಿಜೆಪಿಯಲ್ಲಿ ಮುನಿಸಿಕೊಂಡು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದೆ. 

ಸಿಎಂ ಕಚೇರಿಯಿಂದ ಬಂದಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಗದಗ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ನಾಮಧಾರಿ ರೆಡ್ಡಿ ಸಮುದಾಯದ ಎಚ್ ಕೆ ಪಾಟೀಲ್, ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರವನ್ನು ಪ್ರತಿನಿಧಿಸುವ ಕೃಷ್ಣ ಬೈರೇಗೌಡ, ಮಂಡ್ಯ ಜಿಲ್ಲೆಯಿಂದ ಎನ್.ಚೆಲುವರಾಯ ಸ್ವಾಮಿ, ಮೈಸೂರು ಜಿಲ್ಲೆಯಿಂದ ಕೆ.ವೆಂಕಟೇಶ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಡಾ.ಎಂ.ಸಿ. ಸುಧಾಕರ್ ಅವರಿಗೆ ಸಚಿವ ಸ್ಥಾನ ಲಭಿಸಿದ್ದು ಇವರೆಲ್ಲರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಬೀದರ್‌ನಿಂದ ಕಾಂಗ್ರೆಸ್‌ನ ಹಿರಿಯ ನಾಯಕ ಈಶ್ವರ ಖಂಡ್ರೆ, ಯಾದಗಿರಿಯಿಂದ ಶರಣಬಸಪ್ಪ ದರ್ಶನಾಪುರ, ವಿಜಯಪುರದಿಂದ ಶಿವಾನಂದ್ ಪಾಟೀಲ್, ದಾವಣಗೆರೆಯಿಂದ ಎಸ್.ಎಸ್. ಮಲ್ಲಿಕಾರ್ಜುನ್, ಬೆಳಗಾವಿಯಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಚಿವರಾಗಿ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಲಗೈ ಬಂಟ ಡಾ.ಎಚ್.ಸಿ. ಮಹದೇವಪ್ಪ ಮೈಸೂರು ಜಿಲ್ಲೆಯಿಂದ, ಬಾಗಲಕೋಟೆ ಜಿಲ್ಲೆಯಿಂದ ಆರ್.ಬಿ.ತಿಮ್ಮಾಪುರ, ಕೊಪ್ಪಳ ಜಿಲ್ಲೆಯಿಂದ ಶಿವರಾಜ್ ತಂಗಡಗಿ ಅವರಿಗೆ ಸಚಿವ ಸ್ಥಾನ ಒಲಿದಿದ್ದು ಇವರೆಲ್ಲರೂ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. 

ತುಮಕೂರು ಜಿಲ್ಲೆಯ ಕೆ ಎನ್ ರಾಜಣ್ಣ ಮತ್ತು ಸಿದ್ದರಾಮಯ್ಯ ಅವರ ಕಟ್ಟಾ ಅನುಯಾಯಿ ಬಳ್ಳಾರಿ ಜಿಲ್ಲೆಯ ಬಿ.ನಾಗೇಂದ್ರ ಪರಿಶಿಷ್ಟ ಪಂಗಡದ ಸಮುದಾಯದವರು. 

ಬೆಂಗಳೂರಿನ ಗಾಂಧಿನಗರ ಕ್ಷೇತ್ರವನ್ನು ಪ್ರತಿನಿಧಿಸುವ 6 ಬಾರಿ ಶಾಸಕ ಮತ್ತು ಮಾಜಿ ಕೆಪಿಸಿಸಿ ಮುಖ್ಯಸ್ಥ ದಿನೇಶ್ ಗುಂಡೂರಾವ್ ಅವರಿಗೆ ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ. ಇವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಉತ್ತರ ಕನ್ನಡ ಜಿಲ್ಲೆಯ ಮೊಗವೀರ ಸಮುದಾಯಕ್ಕೆ ಸೇರಿದ ಮಾಂಕಾಳ್ ವೈದ್ಯ ಅವರನ್ನು ಪರಿಗಣಿಸಿ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಅವರನ್ನು ಕೈಬಿಡಲಾಗಿದೆ.

ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ಬೀದರ್‌ನ ಹಿರಿಯ ಕಾಂಗ್ರೆಸ್ಸಿಗ ರಹೀಮ್ ಖಾನ್ ಸಂಪುಟದ ಭಾಗವಾಗಿದ್ದಾರೆ. ಎಸ್ಟಿ ಸಮುದಾಯಕ್ಕೆ ಸೇರಿದ ಮೂರು ಬಾರಿ ಶಾಸಕರಾಗಿರುವ ರಘು ಮೂರ್ತಿ ಬದಲಿಗೆ ಚಿತ್ರದುರ್ಗದಿಂದ ಜೈನ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಡಿ.ಸುಧಾಕರ್ ಅವರಿಗೆ ಕ್ಯಾಬಿನೆಟ್ ಸ್ಥಾನವನ್ನು ನೀಡಲಾಗಿದೆ.

ಮರಾಠ ಸಮುದಾಯಕ್ಕೆ ಸೇರಿದ ಧಾರವಾಡದ ಸಂತೋಷ್ ಲಾಡ್, ರಾಜು ಬಿ.ಸಿ ಸಮುದಾಯಕ್ಕೆ ಸೇರಿದ ರಾಯಚೂರಿನ ಎನ್ ಎಸ್ ಬೋಸರಾಜು, ಕುರುಬ ಸಮುದಾಯದ ಸಿದ್ದರಾಮಯ್ಯನವರ ಆಪ್ತ ಭೈರತಿ ಸುರೇಶ್ ಕೂಡ ಸಚಿವರಾಗಲಿದ್ದಾರೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ತವರು ನೆಲದಲ್ಲಿ ಪಕ್ಷದ ಬೇರು ಗಟ್ಟಿಯಾಗಬೇಕು ಎಂಬ ದೃಷ್ಟಿಯಿಂದ ಶಿವಮೊಗ್ಗದಿಂದ ಮಧು ಬಂಗಾರಪ್ಪ ಅವರಿಗೆ ಪಕ್ಷ ಅವಕಾಶ ಕಲ್ಪಿಸಿದೆ. ಮಧು ಬಂಗಾರಪ್ಪ ಈಡಿಗ ಒಬಿಸಿ ಸಮುದಾಯಕ್ಕೆ ಸೇರಿದವರು.

ಪಟ್ಟಿಯನ್ನು ನೋಡಿದರೆ ಸಿಎಂ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಆರು ಲಿಂಗಾಯತರು, ನಾಲ್ವರು ಒಕ್ಕಲಿಗರು, ಐದು ಒಬಿಸಿಗಳು, ಮೂರು ಎಸ್‌ಸಿಗಳು, ಇಬ್ಬರು ಎಸ್‌ಟಿಗಳು, ಬ್ರಾಹ್ಮಣ, ಮುಸ್ಲಿಂ, ಜೈನ ಮತ್ತು ರೆಡ್ಡಿ ಸಮುದಾಯದ ತಲಾ ಒಬ್ಬರು ಎರಡನೇ ಪಟ್ಟಿಯಲ್ಲಿ ಸಂಪುಟ ಸ್ಥಾನ ಪಡೆದಿದ್ದಾರೆ.

ಲಿಂಗಾಯತ ಸಮುದಾಯದ ಎಲ್ಲಾ ಉಪಜಾತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಎಂಟು ಕ್ಯಾಬಿನೆಟ್ ಸ್ಥಾನಗಳನ್ನು ನೀಡಲಾಗಿದೆ. ಒಕ್ಕಲಿಗರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸೇರಿ ಐದು ಪ್ರಾತಿನಿಧ್ಯ ಸಿಕ್ಕಿದೆ. ದಲಿತರಿಗೆ ಒಂಬತ್ತು ಕ್ಯಾಬಿನೆಟ್ ಸ್ಥಾನಗಳು ದೊರೆತಿವೆ. ಎಡ ಮತ್ತು ಬಲ ಉಪಗುಂಪು ಗಳಿಗೆ ಸಮಾನ ಪ್ರಾತಿನಿಧ್ಯ ನೀಡಲಾಗಿದೆ.

ಎಸ್ಟಿ ಸಮುದಾಯದ ಮೂವರಿಗೆ ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ. ರಾಜು ಬೋಸರಾಜು ಕ್ಷತ್ರಿಯ ಮತ್ತು ಮಂಕಾಳ ವೈದ್ಯ ಮೀನುಗಾರರಂತಹ ಸಣ್ಣ ಸಮುದಾಯಗಳನ್ನು ಪ್ರತಿನಿಧಿಸುತ್ತಿದ್ದಾರೆ. 

ಸಿಎಂ ಸಿದ್ದರಾಮಯ್ಯ ಅವರು ಕುರುಬ ಸಮುದಾಯದವರಾಗಿರುವುದರಿಂದ ಕುರುಬ ಸಮುದಾಯಕ್ಕೆ ಸುರೇಶ್ ಅವರಿಗೆ ಒಂದು ಸ್ಥಾನ ಮಾತ್ರ ನೀಡಲಾಗಿದೆ. ಮುಸ್ಲಿಂ ಸಮುದಾಯವನ್ನು ಇಬ್ಬರು ಮಂತ್ರಿಗಳು ಬಿ.ಝಡ್. ಜಮೀರ್ ಅಹ್ಮದ್ ಖಾನ್, ರಹೀಮ್ ಖಾನ್ ಪ್ರತಿನಿಧಿಸಿದರೆ, ಯು.ಟಿ. ಖಾದರ್ ಅವರನ್ನು ಸ್ಪೀಕರ್ ಮಾಡಲಾಗಿದೆ – ರಾಜ್ಯ ವಿಧಾನಸಭೆಯ ಸ್ಪೀಕರ್ ಆದ ಮೊದಲ ಮುಸ್ಲಿಂ ಶಾಸಕರಾಗಿದ್ದಾರೆ. ಕ್ರಿಶ್ಚಿಯನ್ ಕೆ.ಜೆ. ಜಾರ್ಜ್ ಮತ್ತು ಜೈನ ಸಮುದಾಯಗಳಿಗೆ ಡಿ. ಸುಧಾಕರ್ ಒಂದು ಸ್ಥಾನ ನೀಡಲಾಗಿದೆ.

ಕಾಂಗ್ರೆಸ್ ಸಮಾನ ಮತ್ತು ನ್ಯಾಯಯುತ ಅಧಿಕಾರ ಹಂಚಿಕೆಯೊಂದಿಗೆ ಪ್ರದೇಶವಾರು ಮತ್ತು ಸಮುದಾಯದ ತಳಹದಿಯನ್ನು ಸಮತೋಲನ ಗೊಳಿಸಲು ಪ್ರಯತ್ನಿಸಿದೆ. ಉತ್ತರ ಕರ್ನಾಟಕ ಸೇರಿದಂತೆ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳು, ರಾಜ್ಯದ ಮಧ್ಯ ಪ್ರದೇಶ ಮತ್ತು ಮೈಸೂರು ಪ್ರದೇಶಗಳಿಗೂ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ.

ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರಲ್ಲದೆ ಇನ್ನೂ ಎಂಟು ಸಚಿವರು — ಜಿ.ಪರಮೇಶ್ವರ, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ ಮತ್ತು ಅಹಮದ್ ಖಾನ್ ಅವರು ಕಳೆದ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಅವರಲ್ಲಿ ಯಾರಿಗೂ ಇನ್ನೂ ಯಾವುದೇ ಖಾತೆ ಹಂಚಿಕೆಯಾಗಿಲ್ಲ.

Leave a Reply

Your email address will not be published. Required fields are marked *

error: Content is protected !!