ರಾಜ್ಯದ ಡಬಲ್ ಸ್ಟೇರಿಂಗ್ ಸರ್ಕಾರದಲ್ಲಿ ಸಿಎಂ ಸೈಲೆಂಟ್, ಡಿಸಿಎಂ ವೈಲೆಂಟ್- ಆರ್.ಅಶೋಕ್
ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಕಾರ್ಡ್ ಯಾರು ಯಾರಿಗೆ ಗ್ಯಾರಂಟಿ ಎಂದು ಗೊತ್ತಿಲ್ಲ. ಇದೊಂದು ಡಬಲ್ ಸ್ಟೇರಿಂಗ್ ಸರ್ಕಾರ ಎಂದು ಮಾಜಿ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಸ್ಥಾನ ಸಾಂವಿಧಾನಿಕ ಹುದ್ದೆ ಅಲ್ಲ. ಪಾರ್ಟಿ ಘೋಷಣೆಯಿಂದ ಇದು ಸಿಕ್ಕಿದೆ. ಪ್ರತಿ ಸಭೆಯಲ್ಲೂ ಸಿಎಂ ಮಾತನಾಡುವ ಮೊದಲು ಉಪ ಮುಖ್ಯಮಂತ್ರಿ ಮಾತನಾಡುತ್ತಾರೆ. ಹೊಸ ಸರಕಾರ ಬಂದಾಗ ಮುಖ್ಯಮಂತ್ರಿಗಳು ಖಡಕ್ ಮಾತನಾಡುವುದು ಪರಿಪಾಠ. ಆದರೆ, ಇಲ್ಲಿ ಸಿಎಂ ಸೈಲೆಂಟ್, ಡೆಪ್ಯುಟಿ ಸಿಎಂ ವಯಲೆಂಟ್. ಅಧಿಕಾರಿಗಳು, ಪೊಲೀಸರು, ಹಿಂದೂ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ. ಧಮ್ಕಿ ಹಾಕುವುದು ಅವರ ಹಣೆಬರಹ ಎಂದು ನುಡಿದರು.
ಜನರಿಗೆ ಕೊಟ್ಟ ಗ್ಯಾರಂಟಿಗಳನ್ನು ಸಿದ್ದರಾಮಯ್ಯ- ಡಿಕೆ ಶಿವಕುಮಾರ್‍ರವರ ಡಬಲ್ ಸ್ಟೇರಿಂಗ್ ಸರಕಾರ ಮಾಡದೆ ಇರುವುದು ರಾಜ್ಯದ ಜನರಿಗೆ ಮಾಡಿದ ದೊಡ್ಡ ಅಪಮಾನ. ಸಿದ್ದರಾಮಯ್ಯ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾ ಅವರು ಪ್ರತ್ಯೇಕ ಗ್ಯಾರಂಟಿ ಕಾರ್ಡ್ ಹಿಡಿದರು. ಸರಕಾರ ಬಂದು 24 ಗಂಟೆಗಳ ಒಳಗೆ ಮಾಡುವುದಾಗಿ ಹೇಳಿದ್ದರು. 240 ಗಂಟೆ ಕಳೆದರೂ ಅವು ಈಡೇರಿಲ್ಲ. ಶಾಸಕರು ಮತ್ತು ಸಿಎಂ, ಡಿಸಿಎಂರವರು ಸೋನಿಯಾ- ರಾಹುಲ್ ಮನೆಗೆ ಹೋಗಿ ಖಾತೆ ಗ್ಯಾರಂಟಿ ಮಾಡುತ್ತಿದ್ದಾರೆ. ಜನರ ಭಾವನೆಗೆ ಬೆಲೆ ಇಲ್ಲ ಎಂದು ಟೀಕಿಸಿದರು.
ದಾರಿಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿ ಕೊಡಲು ಸಾಧ್ಯವೇ ಎನ್ನುವ ಡಿಸಿಎಂ ದಾರಿಯಲ್ಲಿ ಹೋಗುವವರಿಂದ ಮತ ಹಾಕಿಸಿದ್ದಾರೆ ಅಲ್ಲವೇ? ಎಲ್ಲರಿಗೂ ದಾರಿಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿ ಕೊಟ್ಟು ಈಗ ಅಪಮಾನ ಮಾಡುತ್ತೀರಲ್ಲಾ? ನಿಮಗೆ ನಾಚಿಕೆ ಆಗುವುದಿಲ್ಲವೇ? ಪ್ರತಿಯೊಬ್ಬರ ಮನೆಗೂ 200 ಯೂನಿಟ್ ಉಚಿತ ಎಂದಿದ್ದ ಸಿದ್ದರಾಮಯ್ಯರವರು ಈಗ ಶರ್ತ ವಿಧಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದು ಡಬಲ್ ಸ್ಟಾಂಡರ್ಡ್ ಎಂದು ಆರ್. ಅಶೋಕ್ ಅವರು ಟೀಕಿಸಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದಿದ್ದರು. ‘ಮಾವನ ಮನೆಗೆ ಹೋಗುವವರಿಗೆ, ಸೊಸೆ ಕರೆದುಕೊಂಡು ಬರಲು ಅತ್ತೆ ಹೋದರೆ ಫ್ರೀ, ಹಾಸನಕ್ಕೆ ಹೋಗಲು ಫ್ರೀ’ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಮಹಿಳೆಯರು ಯಾರೂ ಟಿಕೆಟ್ ತೆಗೆದುಕೊಳ್ಳಬೇಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ದ್ವಿಮುಖ ನೀತಿ ಅನಾವರಣ ಆಗುತ್ತಿದೆ ಎಂದು ಆಕ್ಷೇಪಿಸಿದರು.
ಆರ್ಥಿಕ ಸಂಪನ್ಮೂಲದ ಬಗ್ಗೆ ಈಗ ಮಾತನಾಡುತ್ತಿದ್ದೀರಿ. ಸಿದ್ದರಾಮಯ್ಯನವರು 13 ಬಜೆಟ್ ಮಂಡಿಸಿದವರು. ನಿಮಗೆ ಮಾಹಿತಿ- ಜ್ಞಾನ ಇರಲಿಲ್ಲವೇ? ವಿದ್ಯುತ್ ಬಗ್ಗೆ ಅರಿವಿಲ್ಲವೇ? ಜ್ಞಾನ ಇಲ್ಲದೆ ನಿಮ್ಮ ಪ್ರಣಾಳಿಕೆ ಪ್ರಿಂಟ್ ಮಾಡಿದ್ದೀರಾ? ಎಂದು ಕೇಳಿದರು. ಜನ ನಗುವಂತಾಗಿದೆ ಅಲ್ಲವೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.