ನರೇಂದ್ರ ಮೋದಿ ಸರ್ಕಾರಕ್ಕೆ 9 ವರ್ಷಗಳು- ಒಂಬತ್ತು ಪ್ರಶ್ನೆ ಕೇಳಿದ ಕಾಂಗ್ರೆಸ್ 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ 9 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ರೈತರ ಆದಾಯದಂತಹ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್, ಬಿಜೆಪಿ ಅಧಿಕಾರವಧಿಯಲ್ಲಿ ದ್ರೋಹ ಬಗೆದಿದ್ದು, ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದೆ. ಸರ್ಕಾರ ಈ ದಿನವನ್ನು ಮಾಫಿ ದಿವಸ್ ಎಂದು ಗುರುತಿಸಬೇಕೆಂದು ವಿಪಕ್ಷ ಹೇಳಿದೆ.

ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ, ಸಂವಹನದ ಉಸ್ತುವಾರಿ ಜೈರಾಮ್ ರಮೇಶ್,  ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಎತ್ತಿದ್ದ ವಿಮರ್ಶಾತ್ಮಕ ವಿಷಯಗಳನ್ನು ಈ 9 ಪ್ರಶ್ನೆಗಳು ಆಧರಿಸಿವೆ ಎಂದರು. 

ಪವನ್ ಖೇರಾ ಮತ್ತು ಸುಪ್ರಿಯಾ ಶ್ರಿನಾಟೆ  ರಮೇಶ್ ಅವರೊಂದಿಗೆ ‘ನೌ ಸಾಲ್, ನೌ ಸವಾಲ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಜೈರಾಮ್ ರಮೇಶ್,  ಒಂಬತ್ತು ವರ್ಷಗಳ ಹಿಂದೆ ಇದೇ ದಿನ ಮೋದಿ ಪ್ರಧಾನಿಯಾಗಿದ್ದರು ಮತ್ತು ಆದ್ದರಿಂದ ಪಕ್ಷವು ಒಂಬತ್ತು ಪ್ರಶ್ನೆಗಳನ್ನು ಕೇಳಲು ಬಯಸುತ್ತದೆ. ಈ ಪ್ರಶ್ನೆಗಳ ಬಗ್ಗೆ ಪ್ರಧಾನಿ ಮೌನ ಮುರಿಯಬೇಕೆಂದು ಬಯಸುತ್ತೇವೆ ಎಂದು ರಮೇಶ್ ಹೇಳಿದರು. 

ಭಾರತದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಏಕೆ ಗಗನಕ್ಕೇರುತ್ತಿದೆ? ಶ್ರೀಮಂತರು ಏಕೆ ಶ್ರೀಮಂತರು ಮತ್ತು ಬಡವರು ಬಡವರಾಗಿದ್ದಾರೆ? ಆರ್ಥಿಕ ಅಸಮಾನತೆಗಳಿದ್ದರೂ ಸಾರ್ವಜನಿಕ ಆಸ್ತಿಯನ್ನು ಪ್ರಧಾನಿ ಮೋದಿಯವರ ಸ್ನೇಹಿತರಿಗೆ ಏಕೆ ಮಾರಾಟ ಮಾಡುತ್ತಿದ್ದಾರೆ? ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವಾಗ ರೈತರೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಏಕೆ ಗೌರವಿಸಿಲ್ಲ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧವಾಗಿ ಏಕೆ ಖಾತರಿಪಡಿಸಿಲ್ಲ ಎಂದು ರಮೇಶ್ ಪ್ರಶ್ನಿಸಿದರು. ಕಳೆದ ಒಂಬತ್ತು ವರ್ಷಗಳಿಂದ ರೈತರ ಆದಾಯ ಏಕೆ ದ್ವಿಗುಣಗೊಂಡಿಲ್ಲ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದರು. 

ಸರ್ಕಾರ ಭ್ರಷ್ಟಾಚಾರ ಮತ್ತು ಕ್ರೋನಿಸಂನಲ್ಲಿ ತೊಡಗಿದೆ ಎಂದು ಆರೋಪಿಸಿದ ರಮೇಶ್, ಪ್ರಧಾನ ಮಂತ್ರಿ ತಮ್ಮ ಸ್ನೇಹಿತ ಅದಾನಿ ಲಾಭಕ್ಕಾಗಿ ಎಲ್ಐಸಿ ಮತ್ತು ಎಸ್‌ಬಿಐನಲ್ಲಿ ಜನರು ಕಷ್ಟಪಟ್ಟು ಸಂಪಾದಿಸಿದ ಉಳಿತಾಯವನ್ನು ಏಕೆ ಅಪಾಯಕ್ಕೆ ತಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು. “ಕಳ್ಳರನ್ನು ತಪ್ಪಿಸಿಕೊಳ್ಳಲು ಏಕೆ ಬಿಡುತ್ತಿದ್ದೀರಿ? ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ವ್ಯಾಪಕವಾದ ಭ್ರಷ್ಟಾಚಾರದ ಬಗ್ಗೆ ನೀವು ಏಕೆ ಮೌನವಾಗಿದ್ದೀರಿ ಮತ್ತು ಭಾರತೀಯರನ್ನು ಏಕೆ ಕಷ್ಟಪಡಲು ಬಿಡುತ್ತಿದ್ದೀರಿ” ಎಂದು ಅವರು ಪ್ರಶ್ನಿಸಿದರು. 

ರಾಷ್ಟ್ರೀಯ ಭದ್ರತೆಯ ವಿಷಯದ ಬಗ್ಗೆ, “2020 ರಲ್ಲಿ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ ನಂತರವೂ ಅವರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುವುದನ್ನು ಏಕೆ ಮುಂದುವರಿಸಿದ್ದಾರೆ” ಎಂದು ಕಾಂಗ್ರೆಸ್ ಕೇಳಲು ಬಯಸುತ್ತದೆ. ಚುನಾವಣಾ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ “ದ್ವೇಷದ ರಾಜಕೀಯ” ವನ್ನು ಏಕೆ ಬಳಸಲಾಗುತ್ತಿದೆ ಮತ್ತು ಸಮಾಜದಲ್ಲಿ ಭಯದ ವಾತಾವರಣವನ್ನು ಹೆಚ್ಚಿಸಲಾಗುತ್ತಿದೆ ಎಂದು ಆರೋಪಿಸಿದರು.

‘ಮಹಿಳೆಯರು, ದಲಿತರು, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಬಗ್ಗೆ ಏಕೆ ಮೌನವಾಗಿದ್ದೀರಿ? ಜಾತಿ ಗಣತಿ ಬೇಡಿಕೆಯನ್ನು ಏಕೆ ನಿರ್ಲಕ್ಷಿಸುತ್ತಿದ್ದೀರಿ’ ಎಂದು ಕೇಳಿದ ಜೈರಾಮ್ ರಮೇಶ್, ಕಳೆದ ಒಂಬತ್ತು ವರ್ಷಗಳಲ್ಲಿ ನಮ್ಮ ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!