ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಭಾಷಣ- ಅಶ್ವಥ್ ನಾರಾಯಣ್ ವಿರುದ್ಧ ಪ್ರಕರಣ ದಾಖಲು
ಮೈಸೂರು: ಕಳೆದ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದ ಮಾಜಿ ಸಚಿವ ಡಾ.ಸಿ. ಎನ್. ಅಶ್ವಥ್ ನಾರಾಯಣ್ ಅವರ ವಿರುದ್ಧ ಬುಧವಾರ ಎಫ್ಐಆರ್ ದಾಖಲಾಗಿದೆ.
ಕಳೆದ ಫೆ.14ರಂದು ಮಂಡ್ಯ ಜಿಲ್ಲೆಯ ಸಾತನೂರಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಅಶ್ವತ್ಥನಾರಾಯಣ್ ಅವರು, ಉರಿಗೌಡ ಮತ್ತು ನಂಜೇಗೌಡರು ಟಿಪ್ಪು ಸುಲ್ತಾನನ್ನು ಹೇಗೆ ಕೊಂದು ಹಾಕಿದರೋ, ಹಾಗೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
ಈ ಸಂಬಂಧ ಇಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮೈಸೂರು ಜಿಲ್ಲಾ ಕಾಂಗ್ರೆಸ್ ನಿಯೋಗದೊಂದಿಗೆ ದೇವರಾಜ ಪೊಲೀಸ್ ಠಾಣೆಗೆ ತೆರಳಿ, ಅಶ್ವತ್ಥ ನಾರಾಯಣ ವಿರುದ್ಧ ದೂರು ದಾಖಲಿಸಿದ್ದಾರೆ.
ಕಾಂಗ್ರೆಸ್ ನಾಯಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 506, 153 ರಡಿ ಎಫ್ಐಆರ್ ದಾಖಲಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲೇ ಈ ಸಂಬಂಧ ಕಾಂಗ್ರೆಸ್ ನಾಯಕರು ಅಶ್ವತ್ಥನಾರಾಯಣ್ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ವಾರದಲ್ಲೇ ಅಶ್ವತ್ಥನಾರಾಯಣ್ ವಿರುದ್ಧ ದೂರು ದಾಖಲಿಸಲಾಗಿದೆ.