ಡಿಕೆ.ಸುರೇಶ್- ಎಂ.ಬಿ ಪಾಟೀಲ ನಡುವಿನ ಮುಸುಕಿನ ಗುದ್ದಾಟ ಬಹಿರಂಗ
ಬೆಂಗಳೂರು: ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆಂಬ ಎಂಬಿ ಪಾಟೀಲ್ ಅವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಕಂಪನವನ್ನೇ ಸೃಷ್ಟಿ ಮಾಡಿದ್ದು, ಈ ಬೆಳವಣಿಗೆಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಗಳ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ.
ವಿಧಾನಸೌಧದಲ್ಲಿ ಬುಧವಾರ ಡಿಕೆ.ಸುರೇಶ್ ಹಾಗೂ ಎಂಬಿ ಪಾಟೀಲ್ ಇಬ್ಬರು ಮುಖಾಮುಖಿಯಾಗಿದ್ದು, ಉಭಯ ನಾಯಕರ ನಡುವೆ ಮಾತಿನ ಸಮರ ಇದಕ್ಕೆ ಸಾಕ್ಷಿಯಾಗಿದೆ.
ವಿಧಾನಸೌಧದಲ್ಲಿ ಮುಖಾಮುಖಿಯಾದ ಎಂಬಿ ಪಾಟೀಲ್ ಅವರನ್ನು ಮೊದಲಿಗೆ ದುಗುಟ್ಟಿನೋಡಿದ ಡಿಕೆ.ಸುರೇಶ್ ಅವರು, ಇದೆಲ್ಲಾ ಸರಿ ಇರಲ್ಲ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಶಾಸಕಾಂಗ ಸಭೆಯ ಬಳಿಕ ಸಮ್ಮೇಳನದ ಸಭಾಂಗಣದ ಹೊರ ಭಾಗದಲ್ಲಿ ಡಿಕೆ ಸುರೇಶ್ ಹಾಗೂ ಎಂ.ಬಿ ಪಾಟೀಲ್ ಎದುರುಬದರು ಆಗಿದ್ದಾರೆ.
ಈ ವೇಳೆ ಕಾರಿಡಾರ್‌ನಲ್ಲಿಯೇ ಮಾತು ಆರಂಭಿಸಿದ ಡಿಕೆ ಸುರೇಶ್. ಇದೆಲ್ಲಾ ಸರಿ ಇರಲ್ಲ ಎಂದು ಸಿಟ್ಟಿನಿಂದ ಎಂಬಿ ಪಾಟೀಲ್‌ಗೆ ಹೇಳಿದ್ದಾರೆ. ಇದಕ್ಕೆ ತಕ್ಷಣ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ಎಂಬಿ ಪಾಟೀಲ್‌ಗೆ ಗೊತ್ತಾಗಿಲ್ಲ.
ಬಳಿಕ ಪ್ರತಿಕ್ರಿಯಿಸಿದ ಎಂಬಿ ಪಾಟೀಲ್ ರೌಡಿಸಂ ರೀತಿಯಲ್ಲಿ ಮಾತನಾಡ್ತೀರಿ, ಚೆಂಬರ್‌ಗೆ ಬನ್ನಿ ಮಾತನಾಡೋಣ, ಏನ್ ವಿಷಯ ಇದೆ ಬಗೆಹರಿಸೋಣ ಬನ್ನಿ ಎಂದು ಕರೆದಿದ್ದಾರೆ. ಈ ರೀತಿ ಸಿಟ್ಟಿನಲ್ಲಿಯೇ ಮರು ಮಾತನಾಡಿದ ಡಿಕೆ ಸುರೇಶ್ ಮಾತನಾಡುವ ಮುನ್ನ ಎಚ್ಚರವಿರಲಿ ಎಂದು ಹೇಳಿ ಹೊರಟು ಹೋಗಿದ್ದಾರೆ.
ಇಬ್ಬರ ನಡುವೆ ಸಣ್ಣದಾಗಿಯೇ ಮಾತಿನ ಚಕಮಕಿ ನಡೆದಿದ್ದು, ಅಲ್ಲಿದ್ದ ಇತರ ಶಾಸಕರು ಇಬ್ಬರನ್ನು ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ.